ಅಮೇಥಿಯಿಂದ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ
ರಾಹುಲ್ ಗಾಂಧಿ ಬುಧುವಾರದಂದು ಲೋಕಸಭಾ ಚುನಾವಣೆಗೆ ಅಮೇಥಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ನವದೆಹಲಿ: ರಾಹುಲ್ ಗಾಂಧಿ ಬುಧುವಾರದಂದು ಲೋಕಸಭಾ ಚುನಾವಣೆಗೆ ಅಮೇಥಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ನಾಮ ಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಸಹೋದರಿ ಪ್ರಿಯಾಂಕಾ ಗಾಂಧಿ, ರಾಬರ್ಟ್ ವಾದ್ರಾ, ತಾಯಿ ಸೋನಿಯಾ ಗಾಂಧಿ ಸಾಥ್ ನೀಡಿದ್ದಾರೆ.ಈಗಾಗಲೇ ದಕ್ಷಿಣ ಭಾಗದಲ್ಲಿ ಕೇರಳದ ವಯನಾಡ್ ನಿಂದ ನಾಮಪತ್ರ ಸಲ್ಲಿಸಿರುವ ರಾಹುಲ್ ಗಾಂಧಿಯವರು ಈಗ ಅಮೇಥಿಯಲ್ಲಿಯೂ ಸ್ಪರ್ಧಿಸುವ ಮೂಲಕ ಇದೇ ಮೊದಲ ಬಾರಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ಅಮೇಥಿ ಜೊತೆಗೆ ಕೇರಳದ ವಯನಾಡ್ ನಲ್ಲಿಯೂ ರಾಹುಲ್ ಗಾಂಧಿ ಸ್ಪರ್ಧಿಸುವುದಕ್ಕೆ ಬಿಜೆಪಿ ಸೇರಿ ಸಿಪಿಎಂ ಪಕ್ಷವು ತೀವ್ರ ವಿರೋಧ ವ್ಯಕ್ತಪಡಿಸಿವೆ. ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ರಾಹುಲ್ ಗಾಂಧಿ ತೆರದ ಟ್ರಕ್ ಮೂಲಕ ಮೆರವಣಿಗೆಯಲ್ಲಿ ತೆರಳಿದರು.ಇವರ ಜೊತೆ ಸಹೋದರಿ ಪ್ರಿಯಂಕಾ ಗಾಂಧಿ,ರಾಬರ್ಟ್ ವಾದ್ರಾ ಕೂಡ ಸಾಥ್ ನೀಡಿದರು.
ಇತ್ತೀಚಿಗೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಪಕ್ಷವು ಬಡವರಿಗೆ ಪ್ರತಿವರ್ಷ 72 ಸಾವಿರ ರೂ ದಂತೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಬ್ ಹೋಗಾ ನ್ಯಾಯ್ ಎನ್ನುವ ಘೋಷ ವಾಕ್ಯದನ್ವಯ ಪ್ರಚಾರವನ್ನು ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಿದೆ.
ವಿಶೇಷವೆಂದರೆ ಇದೇ ಮೊದಲ ಬಾರಿಗೆ ಅಧಿಕೃತ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿರುವ ಪ್ರಿಯಂಕಾ ಗಾಂಧಿಯವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ಉದ್ದೇಶಿಸಿದೆ.ಈ ಹಿನ್ನಲೆಯಲ್ಲಿ ಈಗ ಅವರಿಗೆ ಉತ್ತರ ಪ್ರದೇಶದ ಪೂರ್ವ ಭಾಗದ ಜವಾಬ್ದಾರಿಯನ್ನು ಪಕ್ಷ ವಹಿಸಿದೆ.ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮರುಜೀವ ತುಂಬುವ ಇರಾದೆ ಅದರದ್ದಾಗಿದೆ.