ಮುಂಬೈ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನನ್ನ ನಾಯಕರಲ್ಲ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸುವುದನ್ನು ತಾವು ಕಾಯುತ್ತಿರುವುದಾಗಿ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

"ನಾನು ರಾಹುಲ್ ಗಾಂಧಿಯನ್ನು ವೈಯಕ್ತಿಕವಾಗಿ ಇಷ್ಟಪಡುತ್ತೇನೆ. ಆದರೆ ನಾನು ಅವರನ್ನು ನಾಯಕರಾಗಿ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ರಾಹುಲ್ ನನ್ನ ನಾಯಕರಲ್ಲ. ನಾನು ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸುವುದನ್ನು ಕಾಯುತ್ತಿದ್ದೇನೆ" ಎಂದು ಪಟೇಲ್ ಹೇಳಿದ್ದಾರೆ.


ಇದೇ ವೇಳೆ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದರ ಬಗ್ಗೆ ಸ್ಪಷ್ಟಪಡಿಸಿದ ಅವರು, ತಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣೆಗೆ ಸ್ಪರ್ಧಿಸಲು 25 ವರ್ಷ ವಯಸ್ಸಾಗಿರಬೇಕು. ಆದರೆ ನನ್ನ ವಯಸ್ಸು 24. ಆದ್ದರಿಂದ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದರು.


"ಮುಂದಿನ ದಿನಗಳಲ್ಲಿ ನಾನು ಚುನಾವಣೆಯಲ್ಲಿ ಖಂಡಿತ ಸ್ಪರ್ಧಿಸಲು ಸಾಧ್ಯವಾಗುತ್ತದೆ ಮತ್ತು ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಆದರೆ, ನಾನು ವಿಧಾನಸಭೆ ಅಥವಾ ಲೋಕಸಭೆಯನ್ನು ಪ್ರತಿನಿಧಿಸುವ ಕುರಿತು ಜನತೆಯೆ ಅಭಿಪ್ರಾಯ ಅರಿಯುವುದು ಮುಖ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜನತೆ ಏನು ಬಯಸುತ್ತಾರೆ, ಅವರ ಅಗತ್ಯತೆಗಳೇನು ಎಂಬುದನ್ನು ನಾನು ಅರ್ಥಮಾಡಿಕೊಳ್ಳಬೇಕಿದೆ" ಎಂದು ಪಟೇಲ್ ಹೇಳಿದ್ದಾರೆ. 


ಕಳೆದ ವರ್ಷ, ಕಡಿಮೆ ವಯಸ್ಸಿನಿಂದಾಗಿ ಗುಜರಾತ್‌ ಚುನಾವಣೆಯಲ್ಲೂ ಹಾರ್ದಿಕ್ ಪಟೇಲ್ ಸ್ಪರ್ಧಿಸಿರಲಿಲ್ಲ. ಜೊತೆಗೆ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಾರ್ದಿಕ್ ಪಟೇಲ್‌ ಬೆಂಬಲ ನೀಡಿದ್ದರು.