ಮಹಿಳಾ ಅಸುರಕ್ಷತೆ ಸಮೀಕ್ಷೆ ವರದಿ ದೇಶವೇ ತಲೆತಗ್ಗಿಸುವಂತೆ ಮಾಡಿದೆ: ರಾಹುಲ್ ವಾಗ್ದಾಳಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯ ವಿಷಯದಲ್ಲಿ ವಿಶ್ವಮಟ್ಟದಲ್ಲಿ ಭಾರತದ ಹೆಸರು ಮುಂಚೂಣಿಯಲ್ಲಿದೇ ಎಂದು ಸಮಿಕ್ಷೆಯೊಂದು ವರದಿ ಮಾಡಿರುವುದು ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಯರಿಗೆ ಅಫ್ಘಾನಿಸ್ತಾನ, ಸಿರಿಯಾ ದೇಶಗಳಿಗಿಂತ ಭಾರತ ಹೆಚ್ಚು ಅಪಾಯಕಾರಿ
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ನೆಸ್ ವಿಡಿಯೋ ಮತ್ತು ಆ ಬಗ್ಗೆ ಪ್ರಕಟವಾದ ವರದಿಯೊಂದನ್ನು ಟ್ಯಾಗ್ ಮಾಡಿ "ದೇಶದ ಪ್ರಧಾನಿ ಮೋದಿ ಅವರು ತಮ್ಮ ಉದ್ಯಾನವನದಲ್ಲಿ ಯೋಗದ ವಿಡಿಯೋ ಮಾಡುವಲ್ಲಿ ತಲ್ಲಿನರಾಗಿದ್ದಾರೆ. ಆದರೆ, ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಅಫ್ಘಾನಿಸ್ತಾನ ಮತ್ತು ಸಿರಿಯಾಗಿಂತಲೂ ಭಾರತವು ಮಹಿಳೆಯರಿಗೆ ಅಪಾಯಕಾರಿ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಇದು ನಮ್ಮ ದೇಶಕ್ಕೇ ಆದ ಅವಮಾನ" ಎಂದು ರಾಹುಲ್ ಬರೆದಿದ್ದಾರೆ.
ಭಾರತವು ಮಹಿಳೆಯರಿಗೆ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದೆ. ಅಫ್ಘಾನಿಸ್ತಾನ ಮತ್ತು ಸಿರಿಯಾಗಿಂತಲೂ ಭಾರತವು ಮಹಿಳೆಯರಿಗೆ ಅಪಾಯಕಾರಿ ಎಂದು ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ನಡೆಸಿದ ಸಮೀಕ್ಷೆಯ ವರದಿಯಲ್ಲಿ ಬಹಿರಂಗಪಡಿಸಿತ್ತು.