ಜಸ್ಟ್ 20 ಸೆಕೆಂಡ್... ವಿಮಾನ ದುರಂತದಿಂದ ರಾಹುಲ್ ಗಾಂಧಿ ಸೇಫ್
20 ಸೆಕೆಂಡ್ ತಡವಾಗಿದ್ದರೆ ರಾಹುಲ್ ವಿಮಾನ ಸ್ಫೋಟಗೊಳ್ಳುತ್ತಿತ್ತು.
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ವಿಮಾನ 20 ಸೆಕೆಂಡ್ ತಡವಾಗಿದ್ದರೆ ಪತನಗೊಂಡು ಭಾರೀ ಅನಾಹುತವೇ ಸಂಭವಿಸುತ್ತಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ನಾಗರೀಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಬಹಿರಂಗಪಡಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಬಾಡಿಗೆ ವಿಮಾನದಲ್ಲಿ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. 20 ಸೆಕೆಂಡ್ ತಡವಾಗಿದ್ದರೆ ರಾಹುಲ್ ವಿಮಾನ ಸ್ಫೋಟಗೊಳ್ಳುತ್ತಿತ್ತು, ಅದೃಷ್ಟವಶಾತ್ ರಾಹುಲ್ ಅನಾಹುತದಿಂದ ಪಾರಾಗಿದ್ದಾರೆ ಎಂದು ಡಿಜಿಸಿಎ ವರದಿಯಲ್ಲಿ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇಬ್ಬರು ಸದಸ್ಯರ ಸಮಿತಿ ರಚಿಸಿ, ತನಿಖೆಗೆ ಆದೇಶಿಸಿತ್ತು. ಹಾರಾಟದ ವೇಳೆ ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷಗಳಿಗೆ ಕಾರಣಗಳೇನು ಎಂದು ಕೇಳಿ ಸಲ್ಲಿಕೆಯಾಗಿದ್ದ ಆರ್ಟಿಐ ಅರ್ಜಿಗೆ ನಿರ್ದೇಶನಾಲಯ ಉತ್ತರ ನೀಡಿದೆ.
ಸುಮಾರು ಎಂಟು ಸಾವಿರ ಅಡಿ ಮೇಲೆ ಹಾರುತ್ತಿದ್ದ ವಿಮಾನದ ಆಟೋ ಪೈಲಟ್ ಮೋಡ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಒಂದು ಕಡೆಗೆ ವಿಮಾನ ಹೆಚ್ಚು ವಾಲಿತ್ತು. ದೋಷ ಕಾಣಿಸಿಕೊಂಡಾಗ ವಿಮಾನ ಸ್ವಯಂ ಚಾಲಿತ ವ್ಯವಸ್ಥೆಯಲ್ಲಿತ್ತು. ವಿಮಾನ ಮೇಲಿಂದ ಕೆಳಕ್ಕೆ ಕುಸಿಯುತ್ತಾ ಬಂದಿತ್ತು. ಮೊದಲಿಗೆ ದೋಷ ಉಂಟಾಗಿದ್ದು ಪೈಲಟ್ ಅರಿವಿಗೆ ಬಂದಿರಲಿಲ್ಲ. ಆನಂತರ ಸಮಸ್ಯೆ ಅರಿವಿಗೆ ಬಂದು, ವಿಮಾನವನ್ನು ನಿಯಂತ್ರಣಕ್ಕೆ ತರಲು ಪೈಲೆಟ್ಗೆ ಕೆಲ ಸಮಯ ಬೇಕಾಯ್ತು. ಒಂದು ವೇಳೆ ವಿಮಾನದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಅರಿಯಲು ಪೈಲೆಟ್ ಇನ್ನು 20 ಸೆಕೆಂಡ್ ತಡ ಮಾಡಿದ್ದರೂ ವಿಮಾನ ಪತನಗೊಳ್ಳುತ್ತಿತ್ತು ಎಂದು ವಿಮಾನಯಾನ ನಿರ್ದೇಶನಾಲಯ ತನ್ನ ವರದಿಯಲ್ಲಿ ತಿಳಿಸಿದೆ.
ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಅನುಮಾನಾಸ್ಪದ ಲ್ಯಾಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಮಾನದಲ್ಲಿ ತಾಂತ್ರಿಕ ದೋಷ ಸೃಷ್ಟಿಯಾಗಿದ್ದು, ಅನುಮಾನಸ್ಪದ ಮತ್ತು ಕಳಪೆ ನಿರ್ವಹಣೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಾಕೀರ್ ಸನಧಿಯವರು ಐಪಿಸಿ ಸೆಕ್ಷನ್ 287, 336 ಮತ್ತು ಏರ್ ಕ್ರಾಫ್ಟ್ ಕಾಯ್ದೆ 1934ರ ಅಡಿ VT-AVH ವಿಶೇಷ ವಿಮಾನದ ಇಬ್ಬರು ಪೈಲೆಟ್‌ಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.