ರಾಜಸ್ಥಾನ: ಮದುವೆ ದಿಬ್ಬಣದಲ್ಲಿ ಸಾಗುತ್ತಿದ್ದವರ ಮೇಲೆ ಹರಿದ ಟ್ರಕ್, 13 ಜನರ ಸಾವು
9 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 4 ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪ್ರತಾಪಗಡ: ರಾಜಸ್ಥಾನದ ಪ್ರತಾಪಗಡ್ ಜಿಲ್ಲೆಯ ಅಂಬಾವಾಲಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 113 ರಲ್ಲಿ ಭಾರಿ ಅಪಘಾತ ಸಂಭವಿಸಿದೆ. ಮದುವೆ ದಿಬ್ಬಣದಲ್ಲಿ ಸಾಗುತ್ತಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ 13 ಮಂದಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದುರ್ಘಟನೆ ಬಗ್ಗೆ ಮಾತನಾಡಿರುವ ಪ್ರತಾಪ್ ಗಡ ಎಸ್ಪಿ ಅನಿಲ್ ಕುಮಾರ್ ಬೆನಿವಾಲ್, ಈ ಘಟನೆಯಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟರು, 4 ಮಂದಿ ಆಸ್ಪತ್ರೆಗೆ ಸಾಗುವ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 15 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಟ್ರಕ್ ಚಾಲಕ ಪರಾರಿ:
13 ಜನರ ಸಾವಿಗೆ ಕಾರಣನಾದ ಟ್ರಕ್ ಚಾಲಕ ಕುಡಿದಿದ್ದ ಎನ್ನಲಾಗಿದ್ದು, ಘಟನೆ ಬಳಿಕ ಟ್ರಕ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಟ್ರಕ್ ಅನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ. RJ 26 ನಂಬರ್ ಪ್ಲೇಟ್ ಉಳ್ಳ ಟ್ರಕ್ ರಮೇಶ್ ಕುಮಾರ್ ಮಾಲಿ ಎಂಬ ಹೆಸರಿನಲ್ಲಿ ದಾಖಲಾಗಿದೆ. ಅಪಘಾತದ ನಂತರ, ಚೋಟಿ ಸದಡಿ ಠಾಣಾ ಪೋಲಿಸ್ ಸ್ಥಳಕ್ಕೆ ತಲುಪಿದರು. ಇದಲ್ಲದೆ ಸಂಸದ ಸಿ.ಪಿ. ಜೋಶ್, ಜಿಲ್ಲಾ ಎಸ್ಪಿ ಅನಿಲ್ ಬೆನಿವಾಲ್ ಮತ್ತು ಕಲೆಕ್ಟರ್ ಶ್ಯಾಮ್ ಸಿಂಗ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಸತ್ತವರ ಕುಟುಂಬಗಳಿಗೆ ಪರಿಹಾರ ಘೋಷಣೆ:
ಜಿಲ್ಲಾ ಕಲೆಕ್ಟರ್ ಪರವಾಗಿ ಮೃತರ ಕುಟುಂಬಕ್ಕೆ ತಲಾ 50 ಸಾವಿರ ಹಾಗೂ ಗಾಯಗೊಂಡವರಿಗೆ ತಲಾ 25,000 ಸಾವಿರ ಪರಿಹಾರ ಘೋಷಿಸಲಾಗಿದೆ.