ನವದೆಹಲಿ: ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಉಪಸಭಾಪತಿ ಸ್ಥಾನಕ್ಕೆ ಆಡಳಿತ ಪಕ್ಷ ಎನ್​ಡಿಎ ಅಭ್ಯರ್ಥಿಯಾಗಿ ಜೆಡಿಯು ಸಂಸದ ಹರಿವಂಶ ನಾರಾಯಣ ಸಿಂಗ್ ಹಾಗೂ ಯುಪಿಎಯಿಂದ ಕರ್ನಾಟಕದ ಕಾಂಗ್ರೆಸ್​ ಸಂಸದ ಬಿ.ಕೆ. ಹರಿಪ್ರಸಾದ್ ಕಣದಲ್ಲಿದ್ದಾರೆ. ಎರಡೂ ಬಣದವರೂ ತಮಗೇ ಬಹುಮತ ಲಭಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.


COMMERCIAL BREAK
SCROLL TO CONTINUE READING

ಬೆಳಿಗ್ಗೆ 11 ಗಂಟೆಗೆ ಸಂಸತ್ ಭವನದಲ್ಲಿ ನಡೆಯುವ ಚುನಾವಣೆಯತ್ತ ಈಗ ಎಲ್ಲರ ಚಿತ್ತ ನೆಟ್ಟಿದ್ದು, ಒಟ್ಟು 245 ಸದಸ್ಯ ಬಲ ಹೊಂದಿರುವ ಸದನದಲ್ಲಿ ಅಭ್ಯರ್ಥಿ ಗೆಲುವು ಸಾಧಿಸಲು 123 ಮತಗಳ ಅಗತ್ಯವಿದೆ. ಮ್ಯಾಜಿಕ್ ನಂಬರ್ ಪಡೆಯಲು ಎರಡೂ ಪಕ್ಷಗಳು ಈಗಾಗಲೇ ಸಿದ್ಧತೆ ನಡೆಸಿವೆ. ಸದ್ಯಕ್ಕೆ ಎರಡೂ ಪಕ್ಷಗಳ ಬಳಿ ಮ್ಯಾಜಿಕ್​ ನಂಬರ್​ ಇಲ್ಲವಾದ್ದರಿಂದ ಯಾರ ಬೆಂಬಲ ಯಾವ ಪಕ್ಷಕ್ಕೆ ಸಿಗಲಿದೆ ಎಂಬುದು ತೀವ್ರ ಕುತೂಹಲಕಾರಿಯಾಗಿದೆ.

ಸದನದಲ್ಲಿ ಮತದಾನಕ್ಕೂ ಮುಂಚೆಯೇ, ಬಿಜೆಪಿ ತನ್ನ ಬಳಿ 126 ಸದಸ್ಯ ಬೆಂಬಲವನ್ನು ಹೊಂದಿರುವುದಾಗಿ ಹೇಳಿದೆ. ಇದರಲ್ಲಿ ಎನ್ಡಿಎ 91, ಎಐಎಡಿಎಂಕೆ (13), ಟಿಆರ್ಎಸ್ (06), ವೈಎಸ್ಆರ್ ಕಾಂಗ್ರೆಸ್ (02), ಬಿಜೆಡಿ (09) ಸದಸ್ಯರು ಸೇರಿದ್ದಾರೆ. ಇದಲ್ಲದೆ ಅಮರ್ ಸಿಂಗ್ ಎನ್ಡಿಎ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ.

ಒಂದೆಡೆ ಬಿಜೆಪಿ 126 ಸದಸ್ಯ ಬಲ ಹೊಂದಿರುವುದಾಗಿ ಹೇಳಿದ್ದು, ಮತ್ತೊಂದೆಡೆ ಕಾಂಗ್ರೆಸ್ 115 ಸದಸ್ಯ ಬಲ ಹೊಂದಿರುವುದಾಗಿ ಹೇಳಿದೆ. ಕಾಂಗ್ರೆಸ್ ನ 61 ಸದಸ್ಯರ ಜೊತೆಗೆ, ತೃಣಮೂಲ ಕಾಂಗ್ರೆಸ್, ಬಿಎಸ್ಪಿ, ಟಿಡಿಪಿ, ಎನ್ಸಿಪಿ, ಆಮ್ ಆದ್ಮಿ ಪಕ್ಷಗಳು ಕಾಂಗ್ರೆಸ್ ಪರ ಮತ ಹಾಕುವ ಸಾಧ್ಯತೆ ಇದೆ.