ಯೋಗಕ್ಕಾಗಿ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಗುರುತಿಸಿಕೊಳ್ಳುವುದು ಹೆಮ್ಮೆಯ ಸಂಗತಿ: ಬಾಬಾ ರಾಮ್ ದೇವ್
ಯೋಗ ಮತ್ತು ಆಧ್ಯಾತ್ಮಿಕತೆಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಲಂಡನ್: ಯೋಗ ಮತ್ತು ಆಧ್ಯಾತ್ಮಿಕತೆಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಲಂಡನ್ನಲ್ಲಿರುವ ಮೇಡಮ್ ಟುಸ್ಸಾಡ್ಸ್ ಮೇಣದ ವಸ್ತುಸಂಗ್ರಹಾಲಯದಲ್ಲಿ ತಮ್ಮ ಪ್ರತಿರೂಪ ಸ್ಥಾಪನೆಗೂ ಮುನ್ನ ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಅವರು, ವಿಶ್ವದ ಮತ್ತು ಭಾರತದ ಮಹಾನ್ ಸ್ಟಾರ್'ಗಳ ಜೊತೆ ಒಬ್ಬ ಯೋಗಿಗೆ ಸ್ಥಾನ ಸಿಕ್ಕಿರುವುದು ಬಹಳ ಹೆಮ್ಮೆ ಎನಿಸಿದೆ ಎಂದು ರಾಮ್ ದೇವ್ ಸಂತಸ ವ್ಯಕ್ತಪಡಿಸಿದರು.
"ಪ್ರಧಾನಿ ನರೇಂದ್ರ ಮೋದಿ ಜಿ ಇಲ್ಲಿದ್ದಾರೆ, ನನ್ನ ಹಿಂದೆ ಟ್ರಂಪ್ ಜೀ, ಸಚಿನ್ ತೆಂಡೂಲ್ಕರ್ ಜೀ, ಸಲ್ಮಾನ್ ಜೀ, ಅಮಿತಾಬ್ ಜೀ, ಶಾರುಖ್ ಜೀ.... ಹೀಗೆ ಸಾಕಷ್ಟು ವಿಶ್ವ ವಿಖ್ಯಾತ ನಾಯಕರಿದ್ದಾರೆ. ಇವರ ನಡುವೆ ಆಧ್ಯಾತ್ಮಿಕತೆಯೊಂದಿಗೆ ಒಬ್ಬ ಯೋಗಿಗೆ ಸ್ಥಾನ ದೊರೆತಿರುವುದು ಹೆಮ್ಮೆಯ ಸಂಗತಿ. ಜನರು ಯೋಗ ಮತ್ತು ಆಧ್ಯಾತ್ಮಿಕತೆಗೆ ಆಕರ್ಷಿತರಾಗಬೇಕು. ಈ ಪ್ರತಿಮೆ ಜನರನ್ನು ಮತ್ತಷ್ಟು ಆಕರ್ಷಿಸಲಿದೆ ಎಂಬ ಭರವಸೆಯಿದೆ" ಎಂದು ರಾಮ್ ದೇವ್ ಎಎನ್ಐಗೆ ತಿಳಿಸಿದ್ದಾರೆ.
ಲಂಡನ್'ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ತಮ್ಮ ಪ್ರತಿಮೆ ಸ್ಥಾಪನೆಗೆ 2 ತಿಂಗಳ ಹಿಂದೆ ಪ್ರಸ್ತಾಪ ಬಂದಿದ್ದಾಗಿಯೂ, ಸಾಕಷ್ಟು ಒತ್ತಾಯದ ನಂತರ ಆ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದಾಗಿಯೂ ಬಾಬಾ ರಾಮ್ ದೇವ್ ಇದೇ ಜೂನ್ 22ರಂದು ಬಹಿರಂಗಪಡಿಸಿದ್ದರು.