ನವದೆಹಲಿ:  ಎಟಿಎಂ ವಹಿವಾಟಿನ ಕೆಲವು ನಿಯಮಗಳನ್ನು ಬದಲಾವಣೆ ಮಾಡುವಂತೆ ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ.  ತಾಂತ್ರಿಕ ಮತ್ತು ಇತರ ನಿರ್ದಿಷ್ಟ ಕಾರಣಗಳಿಂದಾಗಿ ವಿಫಲವಾದ ಸ್ವಯಂಚಾಲಿತ ಟೆಲ್ಲರ್ ಯಂತ್ರ (ಎಟಿಎಂ) ವಹಿವಾಟುಗಳನ್ನು `ಐದು ಉಚಿತ ಮಾಸಿಕ ಎಟಿಎಂ ವಹಿವಾಟು'ಗಳಲ್ಲಿ ಸೇರಿಸಲಾಗುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬುಧವಾರ ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

"ತಾಂತ್ರಿಕ ಕಾರಣಗಳಿಂದಾಗಿ ವಿಫಲವಾದ ವಹಿವಾಟುಗಳು, ಎಟಿಎಂಗಳಲ್ಲಿ ಕರೆನ್ಸಿ(ಹಣ) ಲಭ್ಯವಿಲ್ಲದಿರುವುದು ಇತ್ಯಾದಿಗಳನ್ನು ಉಚಿತ ಎಟಿಎಂ ವಹಿವಾಟಿನ ಸಂಖ್ಯೆಯಲ್ಲಿ ಸೇರಿಸಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ" ಎಂದು ಆರ್‌ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ.


"ಹಾರ್ಡ್‌ವೇರ್, ಸಾಫ್ಟ್‌ವೇರ್, ಸಂವಹನ ಸಮಸ್ಯೆಗಳು; ಎಟಿಎಂನಲ್ಲಿ ಹಣ ಲಭ್ಯವಿಲ್ಲದಿರುವುದು ಮತ್ತು ಬ್ಯಾಂಕ್ ಅಥವಾ ಸೇವಾ ಪೂರೈಕೆದಾರರಿಗೆ ನೇರವಾಗಿ ಅಥವಾ ಸಂಪೂರ್ಣವಾಗಿ ಸೂಚಿಸಬಹುದಾದ ಇತರ ಸಮಸ್ಯೆಗಳು; ಅಮಾನ್ಯ ಪಿನ್ ಅಥವಾ ಅನುಮೋದನೆ ಗೊಳಿಸುವಿಕೆ ಅಂತಹ ತಾಂತ್ರಿಕ ಕಾರಣಗಳನ್ನು ವಿಫಲವಾದ ವಹಿವಾಟುಗಳು ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಇಂತಹ ವಹಿವಾಟುಗಳನ್ನು ಗ್ರಾಹಕರಿಗೆ ಮಾನ್ಯ ಎಟಿಎಂ ವಹಿವಾಟು ಎಂದು ಪರಿಗಣಿಸಲಾಗುವುದಿಲ್ಲ" ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.


ಪರಿಣಾಮವಾಗಿ, ಈ ವಿಫಲ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.


"ನಗದು ರಹಿತ ವಹಿವಾಟುಗಳು (ಬ್ಯಾಲೆನ್ಸ್ ವಿಚಾರಣೆ, ಚೆಕ್ ಬುಕ್ ವಿನಂತಿ, ತೆರಿಗೆಗಳ ಪಾವತಿ, ಹಣ ವರ್ಗಾವಣೆ), ಇದು ಉಚಿತ ಎಟಿಎಂ ವಹಿವಾಟಿನ ಭಾಗವಾಗುವುದಿಲ್ಲ" ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ .


ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ನಗರ ಸಹಕಾರಿ ಬ್ಯಾಂಕುಗಳು, ರಾಜ್ಯ ಸಹಕಾರಿ ಬ್ಯಾಂಕುಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಪಾವತಿ ಬ್ಯಾಂಕುಗಳು, ವೈಟ್-ಲೇಬಲ್ ಎಟಿಎಂ ಆಪರೇಟರ್‌ಗಳು ಸೇರಿದಂತೆ ಎಲ್ಲಾ ನಿಗದಿತ ವಾಣಿಜ್ಯ ಬ್ಯಾಂಕುಗಳಿಗೆ ಈ ಆದೇಶಗಳನ್ನು ನೀಡಲಾಗಿದೆ.