RBI ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ
ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿರುವುದಾಗಿ ಊರ್ಜಿತ್ ಪಟೇಲ್ ಹೇಳಿದ್ದಾರೆ.
ನವದೆಹಲಿ: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಆರ್‌ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಾರೆ.
ಸೋಮವಾರ ಸಂಜೆ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿರುವ ಅವರು, ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಡಿಸೆಂಬರ್ 14ರಂದು ಆರ್‌ಬಿಐ ಮಹತ್ವದ ಸಭೆಗೂ ಮುನ್ನವೇ ರಾಜಿನಾಮೆ ನೀಡಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿನ ಆರ್ಥಿಕತೆಯ ಚಂಚಲತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಉನ್ನತ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ತನ್ನ ಪ್ರಸ್ತುತದ ನಗದು ಸಂಗ್ರಹದ ಮಟ್ಟವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎಂದು ಗವರ್ನರ್ ಊರ್ಜಿತ್ ಪಟೇಲ್ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ.
ರಿಸರ್ವ್ ಬ್ಯಾಂಕಿನ 24ನೇ ಗವರ್ನರ್ ಆಗಿ 2016ರ ಸೆಪ್ಟೆಂಬರ್ 5ರಂದು ಅಧಿಕಾರ ಸ್ವೀಕರಿಸಿದ್ದ ಊರ್ಜಿತ್ ಪಟೇಲ್ 2013ರಿಂದ ಉಪ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಹಣ ಮಾರುಕಟ್ಟೆ, ಬ್ಯಾಂಕಿಂಗ್ ವಲಯ ಸುಧಾರಣೆ, ಪಿಂಚಣಿ ನಿಧಿ ಸುಧಾರಣೆಗಳು ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯ ವಿಕಾಸ ಮೊದಲಾದ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 1998ರಿಂದ 2001ರವರೆಗೆ ಹಣಕಾಸು ಸಚಿವಾಲಯದಲ್ಲಿ ಸಲಹೆಗಾರರಾಗಿದ್ದರು.