ಕಡು ನೀಲಿ ಬಣ್ಣದಲ್ಲಿ ಬರಲಿದೆ ರೂ.100ರ ಹೊಸ ನೋಟು!
100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ನವದೆಹಲಿ: ಶೀಘ್ರದಲ್ಲಿಯೇ ಮಹಾತ್ಮಾ ಗಾಂಧಿ ಸರಣಿಯಲ್ಲಿ 100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಈ ನೂತನ ನೋಟಿನ ಹಿಂಭಾಗದಲ್ಲಿ ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ 'ರಾಣಿ ಕಿ ವಾವ್' ಚಿತ್ರಣವನ್ನು ಹೊಂದಿದ್ದು, ನಸು ಕೆನ್ನೀಲಿ ಬಣ್ಣ(ಲ್ಯಾವೆಂಡರ್)ದಲ್ಲಿ ಇರಲಿದೆ. ಅಲ್ಲದೆ, ನೋಟಿನ ಮುಂಭಾಗ ಮತ್ತು ಹಿಂಭಾಗ ಎರಡೂ ಭಾಗಗಳನ್ನೂ ವಿಶಿಷ್ಟ ಬಣ್ಣ ಯೋಜನೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ನೋಟಿನ ಅಳತೆ 66 ಎಂಎಂ × 142 ಎಂಎಂ ಆಗಿದೆ.
ಈ ಹಿಂದೆ ಆರ್ಬಿಐ ಬಿಡುಗಡೆ ಮಾಡಿದ್ದ 100 ರೂ. ಮುಖಬೆಲೆಯ ನೋಟುಗಳ ಚಲಾವಣೆ ಎಂದಿನಂತೆ ಮುಂದುವರೆಯಲಿದೆ. ನೂತನ ಬಣ್ಣ ಮತ್ತು ವಿನ್ಯಾಸದ ನೋಟುಗಳ ಚಲಾವಣೆ ಕ್ರಮೇಣ ಹೆಚ್ಚಾಗಲಿದೆ ಎಂದು ಆರ್ಬಿಐ ಹೇಳಿದೆ.
2016 ರಲ್ಲಿ ನೋಟು ಅಮಾನ್ಯೀಕರಣದ ನಂತರ 500ರೂ. ಮತ್ತು 2000 ರ. ಮುಖಬೆಲೆಯ ಹೊಸ ನೋಟುಗಳನ್ನು ಆರ್ಬಿಐ ಬಿಡುಗಡೆ ಮಾಡಿತ್ತು. ಇವು ಹಳೆಯ ನೋಟುಗಳಿಗಿಂತ ಆಕಾರ ಮತ್ತು ವಿನ್ಯಾಸದಲ್ಲಿ ಬದಲಾವಣೆಯಾಗಿತ್ತು. ಆ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರದ ನಡೆಯನ್ನು ವಿರೋಧಿಸಿದ್ದರು. ಇದಾದ ಕೆಲ ತಿಂಗಳ ಬಳಿಕ 10, 50 ಮತ್ತು 200 ರೂ. ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಿದ್ದ ಆರ್ಬಿಐ, ಇದೀಗ 100ರೂ. ಮುಖಬೆಲೆಯ ಹೊಸ ನೋಟುಗಳ ಬಿಡುಗಡೆಗೆ ಮುಂದಾಗಿದೆ.