ಮತ್ತೆ ಮುಂಬೈ ಪೊಲೀಸರ ಮೊರೆ ಹೋದ ಅತೃಪ್ತ ಶಾಸಕರು!
ನಮಗೆ ಯಾವುದೇ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವ ಉದ್ದೇಶವಿಲ್ಲ- ಅತೃಪ್ತ ಶಾಸಕರು.
ಮುಂಬೈ: ಕಾಂಗ್ರೆಸ್-ಜೆಡಿ (ಎಸ್) ಕರ್ನಾಟಕ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿರುವ 14 ರೆಬೆಲ್ ಶಾಸಕರು ಮತ್ತೆ ಮುಂಬೈ ಪೊಲೀಸರ ಮೊರೆ ಹೋಗಿದ್ದಾರೆ.
ಸಮ್ಮಿಶ್ರ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ದೂರಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರ ಮನವೊಲಿಕೆಗೆ ಹಿರಿಯ ಕಾಂಗ್ರೆಸ್ ನಾಯಕರು ಮುಂಬೈಗೆ ತೆರಳಲಿರುವ ಹಿನ್ನೆಲೆಯಲ್ಲಿ ಮುಂಬೈನ ಪೊವಾಯ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಭಾನುವಾರ ಪತ್ರ ಬರೆದು ಕಾಂಗ್ರೆಸ್ ನಾಯಕರಿಂದ ಬೆದರಿಕೆ ಇದ್ದು ನಮಗೆ ಸೂಕ್ತ ರಕ್ಷಣೆ ಒದಗಿಸಿ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಮಲ್ಲಿಕಾರ್ಜುನ್ ಖರ್ಗೆ, ಗುಲಾಮ್ ನಬಿ ಆಜಾದ್, ಮಹಾರಾಷ್ಟ್ರ ಮತ್ತು ಕರ್ನಾಟಕದ ಯಾವುದೇ ಕಾಂಗ್ರೆಸ್ ನಾಯಕರನ್ನು ಅಥವಾ ಯಾವುದೇ ರಾಜಕೀಯ ಮುಖಂಡರನ್ನು ಭೇಟಿಯಾಗಲು ನಾವು ಯಾವುದೇ ಉದ್ದೇಶವನ್ನು ಹೊಂದಿಲ್ಲ". ನಮಗೆ ಅವರಿಂದ ಬೆದರಿಕೆ ಇದೆ. ಈ ನಾಯಕರು ನಮ್ಮನ್ನು ಭೇಟಿಯಾಗುವ ಪರಿಸ್ಥಿತಿ ಎದುರಾದರೆ ಅವರು ನಮ್ಮನ್ನು ಭೇಟಿಯಾಗುವುದನ್ನು ತಡೆಯಲು ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕೆಂದು ನಾವು ಈ ಮೂಲಕ ವಿನಂತಿಸುತ್ತೇವೆ ಎಂದು ಮನವಿ ಮಾಡಿರುವ 14 ರೆಬೆಲ್ ಶಾಸಕರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಕಳೆದ ಒಂದು ವಾರದಲ್ಲಿ ಇದು ಎರಡನೇ ಬಾರಿಗೆ ಬಂಡಾಯ ಶಾಸಕರು ಮುಂಬೈ ಪೊಲೀಸರಿಂದ ರಕ್ಷಣೆ ಕೋರಿದ್ದಾರೆ.