ಈ ಬಾರಿ ಶಿವಸೇನೆಗೆ ಸಿಎಂ ಪಟ್ಟ! ಉದ್ಧವ್ ಠಾಕ್ರೆ ಹೇಳಿದ್ದೇನು?
ಬಿಜೆಪಿ-ಶಿವಸೇನೆ ಮೈತ್ರಿಕೂಟವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 162 ಸ್ಥಾನಗಳನ್ನು ಗೆದ್ದುಕೊಂಡಿದೆ.
ನವದೆಹಲಿ: 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ 162 ಸ್ಥಾನಗಳು ದೊರೆತಿದೆ. ಬಿಜೆಪಿ 106, ಶಿವಸೇನೆ 56 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಅದೇ ಸಮಯದಲ್ಲಿ, ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಶಿವಸೇನೆ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆದಿದೆ ಎಂದು ಹೇಳಲಾಗುತ್ತಿದೆ. ಗುರುವಾರ ಸಂಜೆ ಪಕ್ಷ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಉದ್ಧವ್ ಠಾಕ್ರೆ, ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಮಾತನಾಡುತ್ತಾ, ನಾವು ಪ್ರತಿ ಬಾರಿಯೂ ಬಿಜೆಪಿಯ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ. ತಮ್ಮ ಪಕ್ಷವು 50-50 ಕ್ಕಿಂತ ಕಡಿಮೆ ಸೂತ್ರಕ್ಕೆ ತಲೆಬಾಗುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ, ಈ ಬಾರಿ ಶಿವಸೇನೆಗೆ ಸಿಎಂ ಪಟ್ಟ ಸಿಗಬಹುದೇ ಎಂದು ಉದ್ಧವ್ ಠಾಕ್ರೆ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಠಾಕ್ರೆ, ನಿಮ್ಮ ಬಾಯಿಯಲ್ಲಿ ತುಪ್ಪ-ಸಕ್ಕರೆ ಹಾಕಬೇಕು. "ಲೋಕಸಭಾ ಚುನಾವಣೆಯ ಸಮಯದಲ್ಲಿ 50-50ರ ಸೂತ್ರವನ್ನು ನಿರ್ಧರಿಸಲಾಯಿತು. ಅದನ್ನು ಕಾರ್ಯಗತಗೊಳಿಸಲು ಈಗ ಸಮಯ ಬಂದಿದೆ. ಚುನಾವಣೆಗೆ ಮೊದಲು ರಾಜ್ಯ ಬಿಜೆಪಿಯ ಚಂದ್ರಕಾಂತ್ ಪಾಟೀಲ್ ಅವರು ನನಗೆ ಹೇಳಿದ್ದರು, ನಾನು ಅವರ ಮಾತನ್ನು ಆಲಿಸಿದ್ದೇನೆ. ಈಗ ನಾವು ಮೊದಲು ಭೇಟಿಯಾಗುತ್ತೇವೆ, ಸಭೆಯಲ್ಲಿ ಎಲ್ಲಾ ವಿಷಯಗಳನ್ನು ಚರ್ಚಿಸುತ್ತೇವೆ. ನಂತರ ಏನು ಮಾಡಬೇಕೆಂದು ನಾವು ನಿರ್ಧರಿಸುತ್ತೇವೆ" ಎಂದರು.
ಮತ್ತೊಂದೆಡೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶಿವಸೇನೆ ಹಿಂದುತ್ವದ ವಿಷಯದ ಬಗ್ಗೆ ಒಗ್ಗೂಡಿದೆ, ಮಾತುಕತೆ ನಡೆಸುವ ಪಕ್ಷವಲ್ಲ. ಕೆಲವು ನಿರೀಕ್ಷೆಗಳಿರಬಹುದು, ಆ ಬಗ್ಗೆ ಮಾತುಕತೆ ನಡೆಯಲಿದೆ. ನಮಗೆ 106 ಸ್ಥಾನಗಳು ಸಿಕ್ಕಿವೆ, ನಮ್ಮ ಸೀಟುಗಳು ಕಡಿಮೆಯಾಗಿವೆ ಎಂದು ಫಡ್ನವೀಸ್ ಹೇಳಿದರು. ಕಳೆದ ಬಾರಿ ನಾವು 260 ಸ್ಥಾನಗಳಿಗೆ ಸ್ಪರ್ಧಿಸಿದಾಗ ನಮಗೆ 122 ಸ್ಥಾನಗಳು ಸಿಕ್ಕವು. ಈ ಬಾರಿ ನಾವು 164 ಸ್ಥಾನಗಳಿಗೆ ಸ್ಪರ್ಧಿಸಿದ್ದೇವೆ, ಈಗ ಸೀಟುಗಳು ಕಡಿಮೆಯಾಗಿವೆ ಆದರೆ ನಮ್ಮ ಸ್ಟ್ರೈಕ್ ರೇಟ್ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಮುಂದಿನ ಐದು ವರ್ಷಗಳ ಕಾಲ ನಾವು ಉತ್ತಮ ಸರ್ಕಾರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ ಫಡ್ನವೀಸ್, ಐದು ವರ್ಷಗಳ ಕಾಲ ಸರ್ಕಾರವನ್ನು ನಡೆಸುವ ಮೂಲಕ ಮತ್ತೆ ಸಿಎಂ ಆಗುತ್ತಿರುವುದು ಇದೇ ಮೊದಲು. ನಾನು ಮಹಾರಾಷ್ಟ್ರದ ಆದೇಶವನ್ನು ಸ್ವೀಕರಿಸುತ್ತೇನೆ. ನನ್ನ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಬದುಕಿದೆ ಎಂದು ದೇವೇಂದ್ರ ಫಡ್ನವೀಸ್ ತಿಳಿಸಿದರು.