ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ; 8 ಸಾವು
ಅಪಘಾತದಿಂದಾಗಿ 6 ಜನರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 8 ಜನರ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನಲ್ಲಿದ್ದವರನ್ನು ಹೊರತೆಗೆದಿದ್ದಾರೆ.
ಫತೇಹಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭಾತ್ ಕುಮಾರ್ ಅವರ ಪ್ರಕಾರ, ರಾಯ್ಪುರ್ ನಿವಾಸಿ ಸದಾಫಾಲ್ ಯಾದವ್ ಅವರ ಪುತ್ರ ರಾಮ್ ಸಿಂಹ ಯಾದವ್ ಕಾರಿನಲ್ಲಿ ತಮ್ಮ ಸಹಚರರೊಂದಿಗೆ ಆಗ್ರಾ ಅಂಬೇಡ್ಕರ್ ವಿಶ್ವ ವಿದ್ಯಾಲಯದಲ್ಲಿ ಸಂದರ್ಶನಕ್ಕಾಗಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಕಾರಿನಲ್ಲಿ ಬರುವ ವೇಳೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ನಿಯಂತ್ರಣ ತಪ್ಪಿ ಸಮೀಪದಲ್ಲಿ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಈ ವೇಳೆ 6 ಜನರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಕಾರು ಚಾಲಕ ಕೂಡ ಸೇರಿದ್ದಾರೆ. ಈ ದುರ್ಘಟನೆ ಬಳಿಕ ಟ್ರಕ್ ಚಾಲಕ ಘಟನಾ ಸ್ಥಳದಲ್ಲೇ ತನ್ನ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ.
ಮೃತರನ್ನು ಇನ್ನೂ ಗುರುತಿಸಲಾಗಿಲ್ಲ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.