ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಪ್ಪು ಆರ್ಥಿಕ ನೀತಿಗಳಿಂದ ಆರ್ಥಿಕತೆಯ ಸ್ಥಿತಿ ಹದಗೆಟ್ಟಿದೆ. ಇದರಿಂದಾಗಿ ಕೋಟ್ಯಂತರ ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಭಾರತವು ಬೆಳೆಯುತ್ತಿರುವ ದೇಶವಾಗಿರುವುದರಿಂದ ಉದ್ಯೋಗಾವಕಾಶ ಸೃಷ್ಟಿಸುವುದು ಅತ್ಯಂತ ಅಗತ್ಯದ ಕೆಲಸವಾಗಿದೆ. ಇದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಭಾರತೀಯ ಯುವ ಕಾಂಗ್ರೆಸ್ (Indian Youth Congress) ರಾಷ್ಟ್ರೀಯ ಅಧ್ಯಕ್ಷ ಬಿ.ವಿ.  ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಾಳೆಯಿಂದ (ಆಗಸ್ಟ್ 9) ದೇಶಾದ್ಯಂತ 'ರೋಜ್ಗಾರ್ ದೋ' (ಕೆಲಸ ನೀಡಿ) ಅಭಿಯಾನವನ್ನು  ಪ್ರಾರಂಭಿಸಲಿದೆ.


COMMERCIAL BREAK
SCROLL TO CONTINUE READING

ಕೆಲಸ ನೀಡಿ ಅಭಿಯಾನದ ಮುಖ್ಯ ಉದ್ದೇಶವೆಂದರೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ರಾಜ್ಯ, ಜಿಲ್ಲಾ, ತಾಲೂಕು ಮತ್ತು ಗ್ರಾಮಗಳ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಜಾಗೃತ ಮೂಡಿಸುವುದು ಮತ್ತು ಈ ಮೂಲಕ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರವನ್ನು ಎಚ್ಚರಗೊಳಿಸುವುದು ಎಂದು ಭಾರತೀಯ ಯೂತ್ ಕಾಂಗ್ರೆಸ್ (Indian Youth Congress) ತಿಳಿಸಿದೆ.


ಇಂದು ಭಾರತದಲ್ಲಿ 30 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ನಿರುದ್ಯೋಗದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುಃಖಕರವೆಂದರೆ, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸಿದ್ಧರಿಲ್ಲ. ಪ್ರತಿ ವರ್ಷ 2 ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ವಾಗ್ದಾನ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಅದರಂತೆ, 6 ವರ್ಷಗಳಲ್ಲಿ 12 ಕೋಟಿ ಜನರಿಗೆ ಉದ್ಯೋಗ ಸಿಗಬೇಕಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೋವಿಡ್ 19 (COVID-19)ರ ದುರುಪಯೋಗದಿಂದಾಗಿ 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.  ಅದಕ್ಕಾಗಿಯೇ ಜಿಲ್ಲಾ ಮತ್ತು ವಿಧಾನಸಭಾ ಮಟ್ಟದಲ್ಲಿ ಯುವ ಕಾಂಗ್ರೆಸ್ ಆಂದೋಲನ ಮುಂದುವರಿಸಲಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ (BV Srinivas) ತಿಳಿಸಿದ್ದಾರೆ.


ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕನ್ನಡಿಗ ಬಿ.ವಿ. ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ


ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವ ಮೂಲಕ ಮತ್ತು ಸರ್ಕಾರಿ ಕಂಪನಿಗಳನ್ನು ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರವು ಯುವಕರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿದೆ.  ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಬದಲು, ವಿರುದ್ಧವಾದ ಕೆಲಸವನ್ನು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ರಾಹುಲ್ ರಾವ್ (Rahul Rao) ಪ್ರಕಟಣೆ ಹೊರಡಿಸಿ, ಮೊದಲು ನೋಟಿನ ಆಮನ್ಯಿಕರಣ ಮಾಡಿ ನಂತರ ಜಿಎಸ್‌ಟಿಯನ್ನು ತಪ್ಪಾಗಿ ಅನುಷ್ಠಾನಗೊಳಿಸಿ ನರೇಂದ್ರ ಮೋದಿ (Narendra Modi) ಸರ್ಕಾರವು ದೇಶದ ಆರ್ಥಿಕತೆಯನ್ನು ಹಾಳುಮಾಡಿದೆ. ಮುಂದಾಲೋಚನೆ ಇಲ್ಲದೆ ಲಾಕ್‌ಡೌನ್ ಮಾಡಿದ್ದರಿಂದ ಲಕ್ಷಾಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದರ ವಿರುದ್ಧ ಭಾರತೀಯ ಯುವ ಕಾಂಗ್ರೆಸ್,(Indian Youth Congress) ರಾಷ್ಟ್ರೀಯ ಅಧ್ಯಕ್ಷ ಬಿ.ವಿ.  ಶ್ರೀನಿವಾಸ್,  ಯುವ ಕಾಂಗ್ರೆಸ್ ರಾಷ್ಟ್ರೀಯ ಉಸ್ತುವಾರಿ ಕೃಷ್ಣ ಅಲ್ವಾರು, ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಹಳ್ಳಿಯಲ್ಲಿ ಧರಣಿ ನಡೆಸಲಿದ್ದಾರೆ. ನಿರುದ್ಯೋಗಿ ಯುವಕರು ಮಾನವ ಸರಪಳಿ ನಿರ್ಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.  


ಇದೇ ವೇಳೆ ನಿರುದ್ಯೋಗಿ ಯುವಕರ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುವುದು. ಕೇಂದ್ರ ಸರ್ಕಾರದ ಯುವ ವಿರೋಧಿ ನೀತಿಗಳನ್ನು ದೇಶದ ಜನರ ಮುಂದಿಡಲಾಗುವುದು. ಜೊತೆಗೆ ಈ ಕೆಳಗಿನ ಬೇಡಿಕೆಗಳೊಂದಿಗೆ ದೇಶಾದ್ಯಂತ ಧರಣಿ ಪ್ರದರ್ಶನ ಮತ್ತು ಆಂದೋಲನಗಳನ್ನು ನಡೆಸಲಾಗುವುದು ಎಂದು ರಾಹುಲ್ ರಾವ್ ಹೇಳಿದ್ದಾರೆ.


  • ಕೂಡಲೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.

  • ರೈಲ್ವೆ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಖಾಸಗೀಕರಣವನ್ನು ತಕ್ಷಣ ನಿಲ್ಲಿಸಬೇಕು.

  • COVID-19 ಅವಧಿಯಲ್ಲಿ ಕೆಲಸ ಕಳೆದುಕೊಂಡ ಯುವಕರಿಗೆ ಆರ್ಥಿಕ ಸಹಾಯ ನೀಡಬೇಕು

  • ಸರ್ಕಾರಿ ಇಲಾಖೆಗಳಲ್ಲಿ ಹುದ್ದೆಗಳನ್ನು ರದ್ದುಗೊಳಿಸಬಾರದು

  • ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಶೀಘ್ರವೇ ಬಗೆಹರಿಸಿಕೊಳ್ಳಬೇಕು