ಶಬರಿಮಲೆ ವಿವಾದ: ಹಿಂಸಾಚಾರದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
ಶಬರಿಮಲೆ ಅಯ್ಯಪ್ಪನ ದೇವಾಲಯಕ್ಕೆ ಮಹಿಳಾ ಪ್ರವೇಶದ ನಂತರ ವಿವಿಧ ಹಿಂದೂ ಸಂಘಟನೆಗಳು ಇಂದು ಕೇರಳದಾದ್ಯಂತ ಬಂದ್ ಗೆ ಕರೆ ನೀಡಿವೆ.
ಕೊಚ್ಚಿ: ಬುಧವಾರ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪನ ದೇವಾಲಯ ಪ್ರವೇಶಿಸಿ ದರ್ಶನ ಪಡೆದ ಬಳಿಕ ಕೇರಳದಲ್ಲಿ ಉಂಟಾಗಿದ್ದ ಹಿಮ್ಸಾಚಾರದಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು ಶಬರಿಮಲೆ ಕರ್ಮ ಸಮಿತಿ ಕಾರ್ಯಕರ್ತ ಚಂದ್ರನ್ ಉಣ್ಣಿತಾನ್ ಎಂದು ಗುರುತಿಸಲಾಗಿದೆ. ಏತನ್ಮಧ್ಯೆ, ವಿವಿಧ ಹಿಂದೂ ಸಂಘಟನೆಗಳು ಇಂದು ಕೇರಳದಾದ್ಯಂತ ಬಂದ್ ಗೆ ಕರೆ ನೀಡಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತ್ತಾಯಿಸಿ ಶಬರಿಮಲೆ ಕ್ರಿಯಾ ಸಮಿತಿ ಜ.3ರಂದು ರಾಜ್ಯವ್ಯಾಪಿ ಹರತಾಳಕ್ಕೆ ಕರೆ ನೀಡಿದೆ. ಇಂದು ಕೇರಳದಾದ್ಯಂತ ಪ್ರತಿಭಟನೆ ಮುಂದುವರಿಸಲು ಆರ್ಎಸ್ಎಸ್ ಸೇರಿದಂತೆ ಅನೇಕ ಸಂಘಟನೆಗಳು ನಿರ್ಧರಿಸಿವೆ. ಕೇರಳದಲ್ಲಿ ಕಾಂಗ್ರೆಸ್ ಈ ದಿನವನ್ನು ‘ಕಪ್ಪು ದಿನ’ ಎಂದು ಆಚರಿಸಲು ಮುಂದಾಗಿದೆ. ಆರ್ಎಸ್ಎಸ್ ಪ್ರತಿಭಟನೆಗೆ ಬಿಜೆಪಿ ಕೂಡ ಬೆಂಬಲ ವ್ಯಕ್ತಪಡಿಸಿದೆ.
ಶಬರಿಮಲೆ ದೇವಸ್ಥಾನದಲ್ಲಿ 10 ರಿಂದ 50 ವರ್ಷಗಳಿಂದ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸಾಂವಿಧಾನಿಕ ಪೀಠದಿಂದ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಬಳಿಕ ಹಲವು ಬಾರಿ ಮಹಿಳೆಯರು ದೇವಾಲಯ ಪ್ರವೇಶಿಸಲು ಪ್ರಯತ್ನಿಸಿದರಾದರೂ ವಿಫಲವಾಗಿದ್ದರು. ನಂತರ ಬುಧವಾರ ಮುಂಜಾನೆ 3:45ರ ವೇಳೆಯಲ್ಲಿ ಇಬ್ಬರು ಮಹಿಳೆಯರು ಶಬರಿ ಗಿರಿಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದರು. ಇದರ ಬೆನ್ನಲ್ಲೇ ಹಿಂಸಾಚಾರ ತಲೆದೋರಿತ್ತು.