ನವದೆಹಲಿ: ಚೀನಾದ ವಿರುದ್ಧ ಭಾರತ ಸೇಡು ತೀರಿಸಿಕೊಳ್ಳಲು ಟಿಬೆಟ್​​ನ ಬೌದ್ಧ ಧರ್ಮಗುರು ದಲೈಲಾಮಾ (ಟೆನ್ಸಿನ್ ಗ್ಯಾಟ್ಸೊ) ಅವರಿಗೆ ನಮ್ಮ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡಿ. ಈ ಮೂಲಕ ಚೀನಾಕ್ಕೆ ಮುಖಭಂಗ ಉಂಟುಮಾಡಿ ಎಂಬ ಕೂಗು ಕೇಳಿಬರುತ್ತಿದೆ.


COMMERCIAL BREAK
SCROLL TO CONTINUE READING

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ಮಾತೃ ಸಂಸ್ಥೆಯಾಗಿರುವ ಸಂಘಪರಿವಾರವೇ ಇಂಥದೊಂದು ಸಲಹೆ ನೀಡಿದೆ. 'ಗಡಿಯಲ್ಲಿ ಕ್ಯಾತೆ ತೆಗೆದಿರುವ ಕಮ್ಯುನಿಸ್ಟ್​​ ದೇಶವಾದ ಚೀನಾಕ್ಕೆ ಮುಖಭಂಗ ಉಂಟುಮಾಡಲು, ಟಿಬೆಟ್ ಅನ್ನು ಆಕ್ರಮಿಸಿಕೊಂಡ ಚೀನಾ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ, ಚೀನಾ ನಡೆಗಳನ್ನು ಕಟುವಾಗಿ ವಿರೋಧ ಮಾಡುತ್ತಿರುವ ದಲೈಲಾಮಾ ಭಾರತ ರತ್ನ ಪ್ರಶಸ್ತಿ ಕೊಡುವುದು ಸೂಕ್ತ ಮಾರ್ಗ' ಎಂಬ ಸಲಹೆ ನೀಡಿದೆ ಎಂದು ತಿಳಿದುಬಂದಿದೆ.‌


ಸಂಘಪರಿವಾರದಿಂದ ಇಂಥದೊಂದು ಸಲಹೆ ಬಂದಿರುವ ಹಿನ್ನೆಲೆಯಲ್ಲಿ ಟಿಬೆಟ್ ಧರ್ಮ‌ಗುರು ದಲೈಲಾಮಾ (Dalai Lama) ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಕೆಲವರು ಚೀನಾದ ಇತ್ತೀಚಿನ ಆಕ್ರಮಣಶೀಲತೆಗೆ ತಿರುಗೇಟು ನೀಡಲು ದಲೈ ಲಾಮಾ ಅವರಿಗೆ ಭಾರತ ರತ್ನ ಪ್ರಶಸ್ತಿ (Bharat Ratna award) ಕೊಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು‌ ಇದರಿಂದ ಬೇರೆ ರೀತಿಯ ಅಪಾಯ ಉಂಟಾಗಬಹುದು, ದಲೈ ಲಾಮಾ ಬಗ್ಗೆ ಕಿಡಿಕಾರುತ್ತಿರುವ ಚೀನಾ ಭಾರತದ ಈ ನಡೆಯಿಂದ ಮತ್ತಷ್ಟು ಕೆರಳಬಹುದು, ಸಮಸ್ಯೆ ಉಲ್ಬಣವಾಗಲು ಅನುವು ಮಾಡಿಕೊಡುವುದೇಕೆ? ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.


ಚೀನಾ (China) ದೇಶವು ಟಿಬೆಟ್ ಅನ್ನು ಅತಿಕ್ರಮಣ ಮಾಡಿಕೊಂಡ ಮೇಲೆ ದಲೈ ಲಾಮಾ ಭಾರತಕ್ಕೆ ಬಂದಿದ್ದಾರೆ. ಅವರು 1959ರಿಂದಲೂ ಪೊಟಾಲಾ ಪ್ಯಾಲೇಸ್​ ನಲ್ಲೇ ವಾಸವಾಗಿದ್ದಾರೆ. 14ನೇ ದಲೈಲಾಮಾ ಆಗಿರುವ ಅವರಿಗೆ 84 ವರ್ಷ ವಯಸ್ಸಾಗಿದೆ. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಕೂಗು ಬಹಳ ಹಳೆಯದಾಗಿದ್ದು ಈಗ ಮತ್ತೆ ಕೇಳಿಬರುತ್ತಿದೆ. ಈ ಹಿಂದೆ ಬಿಜೆಪಿ ನಾಯಕರೂ ದಲೈಲಾಮಾ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದ್ದರು.


ಈಗ ಭಾರತ ಮತ್ತು ಚೀನಾ ಗಡಿಯಲ್ಲಿ ಸಂಘರ್ಷ ಉಂಟಾದ ಬಳಿಕ ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮ್​ ರಾವ್​ ಅವರು ಟ್ವೀಟ್​ ಮಾಡಿ, 14ನೇ ದಲೈ ಲಾಮಾ ಅವರ ಆಧ್ಯಾತ್ಮಿಕ ಕೊಡುಗೆಗಳನ್ನು ಪರಿಗಣಿಸಿ, ಅವರಿಗೆ ಭಾರತರತ್ನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.