ನವದೆಹಲಿ: ರಾಜೀನಾಮೆ ಸ್ವೀಕರಿಸುವಲ್ಲಿ ಸ್ಪೀಕರ್ ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ರಾಜ್ಯದ 15 ಅತೃಪ್ತ ಶಾಸಕರ ಅರ್ಜಿ ಬಗ್ಗೆ ಮಂಗಳವಾರ ಸುದೀರ್ಘ 3 ಗಂಟೆ 45 ನಿಮಿಷ ವಾದ-ಪ್ರತಿವಾದವನ್ನು ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ತನ್ನ ತೀರ್ಪು ಪ್ರಕಟಿಸಿದೆ. 


COMMERCIAL BREAK
SCROLL TO CONTINUE READING

ಶಾಸಕರ ರಾಜೀನಾಮೆ ಅಥವಾ ಅನರ್ಹತೆ ಬಗ್ಗೆ ಸ್ಪೀಕರ್ ನಿರ್ಧಾರವೇ ಅಂತಿಮ, ಆದರೆ ಕಾಲಮಿತಿಯೊಳಗೆ ಸಭಾಪತಿಗಳು ನಿರ್ಧಾರ ಕೈಗೊಳ್ಳಬೇಕು. ಸ್ಪೀಕರ್ ನಿರ್ಧಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಿಜೆಐ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿದೆ. 


ಕಲಾಪದಲ್ಲಿ ಭಾಗವಹಿಸುವುದು ಶಾಸಕರ ವಿವೇಚನೆಗೆ ಬಿಟ್ಟಿದ್ದು. ವಿಶ್ವಾಸ ಮತಯಾಚನೆ ವೇಳೆ ಭಾಗವಹಿಸಲೇಬೇಕೆಂದು ಅತೃಪ್ತ ಶಾಸಕರನ್ನು ಒತ್ತಾಯಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.


ಎರಡು ವಾಕ್ಯಗಳಲ್ಲಿ ತೀರ್ಪು ಓದಿದ ಸಿಜೆಐ ರಂಜನ್ ಗೊಗೋಯ್, ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧರಿಸಲಿ. ಅನರ್ಹತೆಯ ಬಗ್ಗೆಯೂ ಸ್ಪೀಕರ್ ನಿರ್ಧಾರ ಕೈಗೊಳ್ಳಬಹುದು ಎಂದು ಸೂಚಿಸಿದರು.



ಸುಪ್ರೀಂಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು:


- ಸಂವಿಧಾನವನ್ನು ಕಾಪಾಡಬೇಕು.


- ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧರಿಸಲಿ. ಅನರ್ಹತೆಯ ಬಗ್ಗೆಯೂ ಸ್ಪೀಕರ್ ನಿರ್ಧಾರ ಕೈಗೊಳ್ಳಬಹುದು.


- ಕಾಲಮಿತಿಯಲ್ಲಿ ಸ್ಪೀಕರ್ ತೀರ್ಪು ಪ್ರಕಟಿಸಬೇಕು.(ಗಮನಾರ್ಹವಾಗಿ ಸುಪ್ರೀಂಕೋರ್ಟ್ ನಿರ್ದಿಷ್ಟ ಕಾಲಮಿತಿ ನಿಗದಿ ಪಡಿಸಿಲ್ಲ)


-  ಸ್ಪೀಕರ್ ಸಮಯದೊಳಗೆ ನಿರ್ಧಾರ ತೆಗೆದುಕೊಳ್ಳಲು ಒತ್ತಾಯಿಸಲಾಗುವುದಿಲ್ಲ.


- ನಿರ್ಧಾರ ಕೈಗೊಳ್ಳುವುದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು. ಸ್ಪೀಕರ್ ತೀರ್ಮಾನವೇ ಅಂತಿಮ.


- ಸ್ಪೀಕರ್ ನಿರ್ಧಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ.


-ನಾಳೆ ವಿಶ್ವಾಸಮತ ಯಾಚಿಸಿ, ಆದರೆ ರಾಜೀನಾಮೆ ನೀಡಿರುವ ಶಾಸಕರ ಹಾಜರಿ ಕಡ್ಡಾಯವಲ್ಲ.


- ಕಲಾಪದಲ್ಲಿ ಭಾಗವಹಿಸುವುದು ಶಾಸಕರ ವಿವೇಚನೆಗೆ ಬಿಟ್ಟಿದ್ದು. ರಾಜೀನಾಮೆ ಪ್ರಕರಣವನ್ನು ಅನುಚ್ಛೇದ 190ರ ಅಡಿಯಲ್ಲಿ ಇತ್ಯರ್ಥಗೊಳಿಸಿ.


- ಇದು ಮಧ್ಯಂತರ ಆದೇಶ ಮಾತ್ರ.


- ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದ್ದು, ವಿಸ್ತೃತ ಪರಾಮರ್ಶೆಯ ಅಗತ್ಯವಿದೆ.


- ವಿಸ್ತೃತ ಪರಾಮರ್ಶೆಯ ಬಳಿಕ ಅಂತಿಮ ತೀರ್ಪು ಪ್ರಕಟ.


ಅತೃಪ್ತ ಶಾಸಕರ ರಾಜೀನಾಮೆ: ಸುಪ್ರೀಂಕೋರ್ಟ್​ನಲ್ಲಿ ನಡೆದ ವಾದ-ವಿವಾದದ ಸಂಪೂರ್ಣ ಮಾಹಿತಿ!