ಅತೃಪ್ತ ಶಾಸಕರ ರಾಜೀನಾಮೆ: ನಾಳೆ ಬೆಳಿಗ್ಗೆ 10:30ಕ್ಕೆ ಸುಪ್ರೀಂಕೋರ್ಟ್ ಆದೇಶ

ಸ್ವ-ಇಚ್ಛೆ ಮತ್ತು ಸತ್ಯ ಎರಡೇ ರಾಜೀನಾಮೆ ಅಂಗೀಕಾರಕ್ಕೆ ಪ್ರಮುಖ ಮಾನದಂಡವಾಗಿದ್ದು, ಕಲಂ 191/2ರ ಪ್ರಕಾರ ರಾಜೀನಾಮೆ ನೀಡುವುದು ಶಾಸಕರ ಹಕ್ಕಾಗಿದೆ. ಶಾಸಕರ ಹಕ್ಕನ್ನು ಸ್ಪೀಕರ್ ತಡೆಯುವಂತಿಲ್ಲ ಎಂದು ಮುಕುಲ್ ರೋಹ್ಟಗಿ ತಮ್ಮ ವಾದ ಮಂಡಿಸಿದರು.

Last Updated : Jul 16, 2019, 03:35 PM IST
ಅತೃಪ್ತ ಶಾಸಕರ ರಾಜೀನಾಮೆ: ನಾಳೆ ಬೆಳಿಗ್ಗೆ 10:30ಕ್ಕೆ ಸುಪ್ರೀಂಕೋರ್ಟ್ ಆದೇಶ title=

ನವದೆಹಲಿ: ರಾಜೀನಾಮೆ ಅಂಗೀಕರಿಸುವಲ್ಲಿ ಸ್ಪೀಕರ್ ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ನಾಳೆ ಬೆಳಿಗ್ಗೆ 10:30ಕ್ಕೆ ತೀರ್ಪನ್ನು ಕಾಯ್ದಿರಿಸಿದೆ. ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರಿಕೆಗೆ ನ್ಯಾಯಾಲಯ ಆದೇಶಿಸಿದೆ.

ಮೊದಲು ವಾದ ಮಂಡಿಸಿದ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ, "ಸ್ಪೀಕರ್ ನಿರ್ಧಾರ ಕೋರ್ಟ್ ವ್ಯಾಪ್ತಿಯೊಳಗೆ ಇದೆ. ಸ್ಪೀಕರ್ ನಿರ್ಧಾರವನ್ನು ನ್ಯಾಯಾಲಯ ಪ್ರಶ್ನಿಸಬಹುದಾಗಿದೆ. ಇಬ್ಬರು ಶಾಸಕರ ಮೇಲಿರುವ ಅನರ್ಹತೆಯ ವಿಚಾರಣೆ ಬಾಕಿ ಇರುವುದು ಉಳಿದ ಶಾಸಕರ ಅಂಗೀಕಾರಕ್ಕೆ ಅಡ್ಡಿಯಾಗುವುದಿಲ್ಲ. 10 ಶಾಸಕರು ತಮ್ಮ ಕೈ ಬರಹದ ಮೂಲಕವೇ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸಭಾಪತಿಯವರು ಅದನ್ನು ಅಂಗೀಕರಿಸಬಹುದಾಗಿದೆ. ಈ ಹಿಂದೆ ಡಾ. ಉಮೇಶ್ ಜಾಧವ್ ಅವರ ವಿರುದ್ಧ ಅನರ್ಹತೆಯ ದೂರು ಇದ್ದರೂ ಕೂಡ ರಾಜೀನಾಮೆ ಅಂಗೀಕರಿಸಲಾಗಿದೆ" ಎಂದು ನ್ಯಾಯಾಲಯದ ಗಮನ ಸೆಳೆದರು. 

ಸ್ವ-ಇಚ್ಛೆ ಮತ್ತು ಸತ್ಯ ಎರಡೇ ರಾಜೀನಾಮೆ ಅಂಗೀಕಾರಕ್ಕೆ ಪ್ರಮುಖ ಮಾನದಂಡ:
ಆರ್ಟಿಕಲ್ 190 ಮತ್ತು ಸೇಡ್ಯೂಲ್ 10ರ ಅನ್ವಯ ಸ್ಪೀಕರ್ ಅವರ ಕಾರ್ಯ ಬೇರೆ ಬೇರೆ ಆಗಿರುತ್ತದೆ. ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸುವ ಅಧಿಕಾರ ನ್ಯಾಯಾಲಯಕ್ಕಿದೆ. ಸ್ವ-ಇಚ್ಛೆ ಮತ್ತು ಸತ್ಯ ಎರಡೇ ರಾಜೀನಾಮೆ ಅಂಗೀಕಾರಕ್ಕೆ ಪ್ರಮುಖ ಮಾನದಂಡವಾಗಿದ್ದು, ಕಲಂ 191/2ರ ಪ್ರಕಾರ ರಾಜೀನಾಮೆ ನೀಡುವುದು ಶಾಸಕರ ಹಕ್ಕಾಗಿದೆ. ಶಾಸಕರ ಹಕ್ಕನ್ನು ಸ್ಪೀಕರ್ ತಡೆಯುವಂತಿಲ್ಲ ಎಂದು ಮುಕುಲ್ ರೋಹ್ಟಗಿ ತಮ್ಮ ವಾದ ಮಂಡಿಸಿದರು.

ಶಾಸಕರು ಅನರ್ಹಗೊಳ್ಳುವಂತ ತಪ್ಪು ಏನು ಮಾಡಿದ್ದಾರೆ?
ರಾಜೀನಾಮೆ ಹಿಂಪಡೆಯಲು ಒತ್ತಡ ಹೇರುವ ಮೂಲಕ ಸರ್ಕಾರ ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ ವಕೀಲ ಮುಕುಲ್ ರೋಹ್ಟಗಿ, ಅನರ್ಹತೆಯ ಅರ್ಜಿಯನ್ನು ತಳ್ಳಿಹಾಕಿ ಎಂದು ನಾವು ಕೇಳುತ್ತಿಲ್ಲ. ಅದರ ವಿಚಾರಣೆ ನಡೆಯಲಿ. ಆದರೆ, ನಮಗೆ ಶಾಸಕರಾಗಿ ಉಳಿಯುವ ಇಚ್ಚೆ ಇಲ್ಲ. ಪಕ್ಷಾಂತರ ಮಾಡಲೂ ಇಷ್ಟವಿಲ್ಲ. ನಾವು ಜನರ ಬಳಿಗೆ ಹೋಗುತ್ತೇವೆ. ಅವರ ತೀರ್ಮಾನದಂತೆ ನಡೆಯುತ್ತೇವೆ. ಶಾಸಕರು ಅನರ್ಹಗೊಳ್ಳುವಂತ ತಪ್ಪು ಏನು ಮಾಡಿದ್ದಾರೆ? ಪಕ್ಷಾಂತರ ನಮ್ಮ ಉದ್ದೇಶವಲ್ಲ, ಸರ್ಕಾರದಿಂದ ಹೊರಬರುವುದು ನಮ್ಮ ಉದ್ದೇಶ ಎಂದು ಅತೃಪ್ತ ಶಾಸಕರ ಪರ ವಾದ ಮಂಡಿಸಿದ್ದಾರೆ.

ನೀವು ಸುಪ್ರೀಂಕೋರ್ಟ್‌ನಿಂದ ಯಾವ ಆದೇಶ ನಿರೀಕ್ಷೆ ಮಾಡುತ್ತಿದ್ದೀರಿ? 
ಈ ಸಂದರ್ಭದಲ್ಲಿ ನೀವು ಸುಪ್ರೀಂಕೋರ್ಟ್‌ನಿಂದ ಯಾವ ಆದೇಶ ನಿರೀಕ್ಷೆ ಮಾಡುತ್ತಿದ್ದೀರಿ ಎಂದು ಅತೃಪ್ತ ಶಾಸಕರ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ ಅವರನ್ನು ಸಿಜೆಐ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮುಕುಲ್ ರೋಹ್ಟಗಿ, ಕಾಲಮಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ನಿಗದಿತ ಸಮಯದಲ್ಲಿ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್‌ಗೆ ಸೂಚಿಸಬಹುದು. ತೀರ್ಪು ಪ್ರಕಟಿಸುವುದು ನಿಮಗೆ ಬಿಟ್ಟಿದ್ದು ಎಂದು ತಿಳಿಸಿದರು.

ಸ್ಪೀಕರ್ ವಿವೇಚನಾಧಿಕಾರವನ್ನು ನಾವು ಪ್ರಶ್ನಿಸುವುದಿಲ್ಲ!
ತ್ರಿಸದಸ್ಯ ಪೀಠದ ಉಳಿದಿಬ್ಬರು ನ್ಯಾಯಾಧೀಶರ ಜತೆ ಸಮಾಲೋಚನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಸ್ಪೀಕರ್ ಹೇಗೆ ತೀರ್ಮಾನ ಕೈಗೊಳ್ಳಬೇಕು ಎನ್ನುವುದನ್ನು ನಾವು ಹೇಳಲು ಸಾಧ್ಯವಿಲ್ಲ. ಸ್ಪೀಕರ್ ವಿವೇಚನಾಧಿಕಾರವನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ, ಶಾಸಕರ ರಾಜೀನಾಮೆ ವಿಳಂಬ ಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟರು.

2018ರ ಮೇ ನಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ  24 ಗಂಟೆಯೊಳಗೆ ವಿಶ್ವಾಸಮತ ಸಾಬೀತಿಗೆ ನ್ಯಾಯಮೂರ್ತಿ ಸಿಕ್ರಿ ಅವರು ಸೂಚಿಸಿದ್ದರು. ಅದರಂತೆ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಗೆ ನಿರ್ದೇಶಿಸಲು ಸುಪ್ರೀಂಕೋರ್ಟ್‌ಗೆ ಅವಕಾಶವಿದೆ ಎಂದು ಹೇಳುವ ಮೂಲಕ ವಕೀಲ ಮುಕುಲ್ ರೋಹ್ಟಗಿ ಅತೃಪ್ತ ಶಾಸಕರ ಅರಾ ತಮ್ಮ ವಾದ ಮಂಡನೆ ಮುಗಿಸಿದರು. 

ಸ್ಪೀಕರ್ ಪರ ವಕೀಲರ ವಾದ:
ಬಳಿಕ ಸ್ಪೀಕರ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ,  ರಾಜೀನಾಮೆ ಅಂಗೀಕಾರಕ್ಕೂ, ಅನರ್ಹತೆಗೂ ಸಂಬಂಧವಿಲ್ಲ ಎಂಬುದು ತಪ್ಪು. ಎರಡಕ್ಕೂ ಪರಸ್ಪರ ಸಂಬಂಧವಿದೆ ಎಂದು ಹಳೇ ತೀರ್ಪುಗಳನ್ನು ಉಲ್ಲೇಖಿಸಿ ತಮ್ಮ ವಾದ ಮಂಡಿಸಿದರು.

ಶಾಸಕರ ರಾಜೀನಾಮೆಗೂ ಮೊದಲೇ ಅನರ್ಹತೆ ದೂರು ಸಲ್ಲಿಕೆ:
ಶಾಸಕರ ಪರ ವಕೀಲರ ಮಾಹಿತಿಯಲ್ಲಿ ತಪ್ಪಿದೆ. ಶಾಸಕರ ರಾಜೀನಾಮೆಗೂ ಮೊದಲೇ ಶಾಸಕರ ವಿರುದ್ಧದ ಅನರ್ಹತೆ ದೂರು ಸಲ್ಲಿಕೆಯಾಗಿತ್ತು ಎಂದು ವಾದ ಮಂಡಿಸಿದ ವಕೀಲ ಸಿಂಘ್ವಿ, ಸ್ಪೀಕರ್ ಶಾಸಕರ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ಆರಂಭಿಸಿದ್ದಾರೆ. ಕೆಲವು ಶಾಸಕರನ್ನು ವಿಚಾರಣೆಗೂ ಕರೆದಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಅತೃಪ್ತ ಶಾಸಕರ ರಾಜೀನಾಮೆ ಏಕೆ ಅಂಗೀಕರಿಸುತ್ತಿಲ್ಲ ಎಂದು ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿಂಘ್ವಿ, ವಿಧಿ 190ರ ಪ್ರಕಾರ ವಿಚಾರಣೆ ನಡೆಯುತ್ತಿದೆ. ರಾಜೀನಾಮೆ ಅಂಗೀಕಾರಕ್ಕೆ ಆತುರವಿಲ್ಲ ಎಂದಿದ್ದಾರೆ. ವಿಧಿ 190ರ ಪ್ರಕಾರ, ರಾಜೀನಾಮೆ ನೀಡಿರುವ ಶಾಸಕರು ಸ್ಪೀಕರ್ ಎದುರು ಹಾಜರಾಗಿ ವಿಚಾರಣೆ ಎದುರಿಸಬೇಕು. ಆದರೆ ಈ ಪ್ರಕರಣದಲ್ಲಿ ಹದಿನೈದು ಶಾಸಕರಲ್ಲಿ ಜುಲೈ 11ರಂದು ಹನ್ನೊಂದು ಶಾಸಕರು ಸ್ಪೀಕರ್ ಮುಂದೆ ಹಾಜರಾಗಿದ್ದಾರೆ. ಇನ್ನೂ ನಾಲ್ವರು ಶಾಸಕರು ಸ್ಪೀಕರ್ ಮುಂದೆ ಹಾಜರಾಗಿಲ್ಲ ಎಂದು ತಿಳಿಸಿದರು.

ರಾಜೀನಾಮೆ ಯಾವಾಗ ಕೊಟ್ಟಿದ್ದಾರೆ ಎಂಬುದು ಮುಖ್ಯವಲ್ಲ. ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಸ್ಪೀಕರ್ ಆರಂಭಿಸಿದ್ದಾರೆ. ತ್ಪರಿತ ಅಂಗೀಕಾರ ಕ್ರಮವಲ್ಲ. ಕ್ರಮಬದ್ಧತೆ ಅನುಸರಿಸುವುದು ನಿಯಮ. ಅದನ್ನೇ ಸ್ಪೀಕರ್ ರಮೇಶ್ ಕುಮಾರ್ ಮಾಡುತ್ತಿದ್ದಾರೆ. ರಾಜೀನಾಮೆಯ ಸತ್ಯಾಸತ್ಯತೆ ಪರಿಶೀಲನೆ ನಡೆಯುತ್ತಿದೆ. ಅತೃಪ್ತ ಶಾಸಕರ ಪರ ವಕೀಲ್ ಮುಕುಲ್ ರೋಹ್ಟಗಿ ಅವರು ನ್ಯಾಯಾಲಯ ಮತ್ತು ವಿಚಾರಣೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದರು.

2018ರ ಕೋರ್ಟ್ ಆದೇಶವು ಸರ್ಕಾರ ರಚನೆಗೆ ಸಂಬಂಧಿಸಿದ್ದಾಗಿತ್ತು. ಆಗ ಸ್ಪೀಕರ್ ಅವರಿಗೆ ಯಾವುದೇ ನಿರ್ದೇಶನವಿರಲಿಲ್ಲ. ವಿಶ್ವಾಸ ಮತ ಸಾಬೀತು ಮಾಡಲು ರಾಜ್ಯಪಾಲರು ಬಿಜೆಪಿಗೆ 15 ದಿನಗಳ ಅವಕಾಶ ನೀಡಿದ್ದರು ಇದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು ಎಂದು ಸಿಂಘ್ವಿ ವಾದಿಸಿದರು.

ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕವೂ ಸ್ಪೀಕರ್ ಏಕೆ ಕ್ರಮ ಜರುಗಿಸಿಲ್ಲ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮನುಸಿಂಘ್ವಿ, ತಮ್ಮ ಇಷ್ಟದ ಪ್ರಕಾರ ತೀರ್ಮಾನ ಅನ್ನುವುದು ಸರಿಯಲ್ಲ. ಶಾಸಕರು ಸ್ಪೀಕರ್ ಬಳಿ ಸಮಯವನ್ನೇ ಕೇಳಿರಲಿಲ್ಲ. ಹಾಗಾಗಿ ಅನರ್ಹತೆ ಅರ್ಜಿ ಮೊದಲು ಪರಿಗಣನೆಯಾಗಲಿದೆ ಎಂದಿದ್ದಾರೆ. 

ಒಂದು ವೇಳೆ ನಾಳೆ ವಿಶ್ವಾಸಮತವಿದೆ ಎಂದಿಟ್ಟುಕೊಳ್ಳಿ. ಇಂದು ಶಾಸಕ ರಾಜೀನಾಮೆ ನೀಡಿದರೆ ಅದೂ ಕೂಡ ಅನರ್ಹತೆಗೆ ದಾರಿ ಮಾಡಿಕೊಡಲಿದೆ. ಏಕೆಂದರೆ ಅದು ಪಕ್ಷ ವಿರೋಧಿ ಚಟುವಟಿಕೆಯಾಗಲಿದೆ. ಹೀಗಾಗಿ ಈ ಪ್ರಕರಣ ಸ್ಪಷ್ಟವಾಗಿ ಅನರ್ಹತೆಯದ್ದಾಗಿದೆ ಎಂದು ಸಿಂಘ್ವಿ ತಮ್ಮ ವಾದ ಮಂಡಿಸಿದರು.

ರಾಜೀನಾಮೆ ಅಂಗೀಕರಿಸದಂತೆ ಸರ್ಕಾರ ಏನಾದ್ರೂ ಸ್ಪೀಕರ್ ಮೇಲೆ ಒತ್ತಡ ಹೇರುತ್ತಿದೆಯೇ? ಸಿಜೆಐ ಪ್ರಶ್ನೆ
ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್ ರನ್ನು ತಡೆಯುತ್ತಿರುವವರು ಯಾರು? ಸರ್ಕಾರ ಏನಾದರೂ ಸ್ಪೀಕರ್ ಮೇಲೆ ಒತ್ತಡ ಹೇರುತ್ತಿದೆಯೇ ಎಂದು ಸಿಜೆಐ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಮನುಸಿಂಘ್ವಿ, ಖಂಡಿತವಾಗಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

24 ಗಂಟೆಯೊಳಗೆ ರಾಜೀನಾಮೆ ಅಂಗೀಕರಿಸಿ ಅನರ್ಹತೆ ಬಗ್ಗೆ ಯಾಕೆ ತೀರ್ಮಾನಿಸಿಲ್ಲ ಎಂದು ಕೋರ್ಟ್ ಮರು ಪ್ರಶ್ನೆ ಹಾಕಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಸಿಂಘ್ವಿ ನಾಳೆ ಒಳಗೆ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ಸ್ಪೀಕರ್ ನಿರ್ಧರಿಸಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 

ನೀವು ನೀಡುವ ಆದೇಶದ ಪರಿಣಾಮಗಳನ್ನು ಮತ್ತೆ ಸರಿಪಡಿಸಲು ಆಗಲ್ಲ:
ಶಾಸಕರ ರಾಜೀನಾಮೆ ಅಂಗೀಕಾರದ ಕುರಿತ ಯಥಾಸ್ಥಿತಿ ಆದೇಶವನ್ನು ತೆರವುಗೊಳಿಸುವಂತೆ ಮನವಿ ಮಾಡಿದ ಸಿಂಘ್ವಿ, ಒಂದು ಸಾಂವಿಧಾನಿಕ ಸಂಸ್ಥೆ ಮತ್ತೊಂದು ಸಾಂವಿಧಾನಿಕ ಸಂಸ್ಥೆಗೆ ನಿರ್ದೇಶನ ನೀಡಬಾರದು. ಅದರಲ್ಲೂ ಸ್ಪೀಕರ್ ಹುದ್ದೆಗೆ ನಿರ್ದೇಶನ ನೀಡಬಾರದು. ಸ್ಪೀಕರ್ ತುಂಬಾ ಅನುಭವಿ ಇದ್ದಾರೆ. ಸ್ಪೀಕರ್ ಕಚೇರಿ ಕೂಡಾ ನ್ಯಾಯಾಂಗವನ್ನು ಗೌರವಿಸುತ್ತದೆ. ನಿಮ್ಮ ಆದೇಶವು ಪ್ರಕರಣಕ್ಕೆ ವಿರುದ್ಧವಾಗಬಹುದು. ಅಲ್ಲದೆ, ಸ್ಪೀಕರ್ ವಿಚಾರದಲ್ಲಿ ನೀಡುವ ಆದೇಶ ನ್ಯಾಯಿಕ ಪರಾಮರ್ಶೆಗೆ ಒಳಪಡಬಹುದು. ನೀವು ನೀಡುವ ಆದೇಶದ ಪರಿಣಾಮಗಳನ್ನು ಮತ್ತೆ ಸರಿಪಡಿಸಲು ಆಗಲ್ಲ. ರಾಜೀನಾಮೆ ಮತ್ತು ಅನರ್ಹತೆ ನಡುವೆ ನೇರ ಸಂಬಂಧವಿದೆ. ಸ್ಪೀಕರ್ ತಪ್ಪು ನಿರ್ಧಾರ ಕೈಗೊಂಡರೆ ನೀವು ಮಧ್ಯಪ್ರವೇಶಿಸಬಹುದು ಎಂದು ತ್ರಿಸದಸ್ಯ ಪೀಠದ ಮುಂದೆ ತಮ್ಮ ವಾದ ಮಂಡಿಸಿದರು.

ನೀವು(ಮನು ಸಿಂಘ್ವಿ) ಹೇಳುತ್ತೀರಿ ಅನರ್ಹತೆಯಿಂದ ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಲಾಗಿದೆ ಎಂದು. ಮುಕುಲ್ ರೋಹ್ಟಗಿ ಹೇಳುತ್ತಾರೆ, ಶಾಸಕರ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು. ಎರಡೂ ಕೂಡ ಗಂಭೀರ ವಿಚಾರಗಳಾಗಿದ್ದು ನಾವು ಅದನ್ನು ಸರಿದೂಗಿಸಬೇಕಿದೆ. ರಾಜೀನಾಮೆ ತಡೆಯಲೆಂದೇ 10ನೇ ಪರಿಚ್ಛೇದ ಪ್ರಯೋಗಿಸಿದ್ದಾರೆ. ರಾಜೀನಾಮೆ ಹಕ್ಕು ಕಿತ್ತುಕೊಳ್ಳಲು ಅನರ್ಹತೆ ಅಸ್ತ್ರ ಉಪಯೋಗಿಸುತ್ತಿದ್ದೀರಾ? ಎಂದು ಮುಖ್ಯನ್ಯಾಯಮೂರ್ತಿಗಳು ಸಿಂಘ್ವಿಯವರನ್ನು ಪ್ರಶ್ನಿಸಿದರು.

2018ರಲ್ಲಿ ನ್ಯಾ. ಸಿಕ್ರಿಯವರು ಆದೇಶ ನೀಡಿದಾಗ ಸರ್ಕಾರವಾಗಲಿ, ಸ್ಪೀಕರ್ ಆಗಲಿ ಇರಲಿಲ್ಲ. ಸ್ಪೀಕರ್ ಇರುವಾಗ ಸ್ವತಂತ್ರವಾಗಿ ಬಿಡಬೇಕು ಎಂದು ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ ಮುಕ್ತಾಯಗೊಳಿಸಿದರು.

ಮುಖ್ಯಮಂತ್ರಿ ಪರ ವಕೀಲರಾದ ರಾಜೀವ್ ಧವನ್ ವಾದ:
ಇದು ಸಾಮೂಹಿಕ ರಾಜೀನಾಮೆ ವಿಚಾರ. ಶಾಸಕರ ರಾಜೀನಾಮೆ ಅಂಗೀಕಾರವಾದರೆ ಅವರೆಲ್ಲರೂ(ಅತೃಪ್ತ ಶಾಸಕರು) ಸಚಿವರಾಗಲಿದ್ದಾರೆ. ಹಾಗಾಗಿ ಶಾಸಕರ ಉದ್ದೇಶದ ಬಗ್ಗೆಯೇ ಸಭಾಪತಿಗಳು ಗಮನವಹಿಸಬೇಕಾಗಿದೆ. ಹೀಗಾಗಿಯೇ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ತಡವಾಗಿದೆ ಎಂದು ಸಿಎಂ ಪರ ವಕೀಲ ರಾಜೀವ್ ಧವನ್ ವಾದ ಆರಂಭಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ವಾದ ಮಂಡಿಸಿದ ಅತೃಪ್ತ ಶಾಸಕರ ಪರ ವಕೀಲರಾದ ಮುಕುಲ್ ರೋಹ್ಟಗಿ ಶಾಸಕರು ಮಂತ್ರಿಯಾಗಲು ಬಯಸಿದ್ದಾರೆಂದು ನಾನು ಹೇಳಿಲ್ಲ ಎಂದು ತಿಳಿಸಿದರು.

ಸರ್ಕಾರ ಉರುಳಿಸುವುದು ಅತೃಪ್ತ ಶಾಸಕರ ಉದ್ದೇಶ:
ಸ್ಪೀಕರ್ ರಾಜೀನಾಮೆ ನೀಡಿದವರ ವಿಚಾರಣೆ ಮಾಡುತ್ತಾರೆ. ಅವರ ಆದೇಶ ಕಾನೂನು ವ್ಯಾಪ್ತಿಯೊಳಗೆ ಇಲ್ಲದಿದ್ದರೆ ನ್ಯಾಯಾಲಯ ಮಧ್ಯಪ್ರವೆಶಿಸಬಹುದು. ಆದರೆ ವಿಚಾರಣೆ ಹಂತದಲ್ಲಿ ಸ್ಪೀಕರ್ ಕೆಲಸದಲ್ಲಿ ಮಧ್ಯಪ್ರವೇಶ ಸಲ್ಲದು. ರಾಜಕಾರಣದಲ್ಲಿ ನ್ಯಾಯಾಲಯ ದಾಳವಾಗುವುದು ಬೇಡ. ರಾಜೀನಾಮೆ ನೀಡಿರುವವರ ಮೇಲ್ಮನವಿಯನ್ನು ಪುರಸ್ಕರಿಸಬೇಡಿ. ಸರ್ಕಾರ ಉರುಳಿಸುವುದೇ ಅವರ ಉದ್ದೇಶವಾಗಿದೆ. 10 ರಿಂದ 15 ಶಾಸಕರು ಒಟ್ಟಿಗೆ ರಾಜೀನಾಮೆ ನೀಡಿ, ಗುಂಪಾಗಿರುವುದರ ಹಿಂದಿನ ಕಾರಣದ ಬಗ್ಗೆ ಸ್ಪೀಕರ್ ವಿಚಾರಣೆ ನಡೆಸಬೇಕಿದೆ ಎಂದು ಧವನ್ ಹೇಳಿದರು.

ಇದು ವೈಯಕ್ತಿಕ ಹಿತಾಸಕ್ತಿಗೆ ನೀಡಿದ ರಾಜೀನಾಮೆ:
ಸಾಮೂಹಿಕ ರಾಜೀನಾಮೆಗೆ ಸ್ಪೀಕರ್ ವಿಚಾರಣೆ ಅಗತ್ಯ. ರಾಜೀನಾಮೆ ನೀಡಿದ ಶಾಸಕರು ಸ್ಪೀಕರ್ ಭೇಟಿಯಾಗುವ ಬದಲು ಮುಂಬೈಗೆ ಹೋಗಿದ್ದಾರೆ. ಆರ್ಟಿಕಲ್ 32ರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ಇದು ಶಾಸಕರು ಹಾಗೂ ಸ್ಪೀಕರ್ ನಡುವಿನ ಸಂಘರ್ಷ ಅಲ್ಲ. ಇದು ವೈಯಕ್ತಿಕ ಹಿತಾಸಕ್ತಿಗೆ ನೀಡಿದ ರಾಜೀನಾಮೆ. ಸ್ಪೀಕರ್ ಕಣ್ಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಈ ಅರ್ಜಿ ವಜಾ ಮಾಡಲು ಯೋಗ್ಯವಾಗಿದೆ ಎಂದು ರಾಜೀವ್ ಧವನ್ ವಾದ ಮಂಡಿಸಿದರು.

ರಾಜೀನಾಮೆ ಬಗ್ಗೆ ವಿಚಾರಣೆ ನಡೆಸಲು ಸ್ಪೀಕರ್ ಗೆ ಸಮಯಾವಕಾಶ ಅಗತ್ಯ:
ನನಗೆ ಮನವರಿಕೆಯಾದರೆ ನಾನು ರಾಜೀನಾಮೆಯನ್ನು ಅಂಗೀಕರಿಸುವೇ ಎಂದು ಸ್ಪೀಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಅವರಿಗೆ(ಸ್ಪೀಕರ್) ಮನವರಿಕೆಯಾಗುವುದೆಂದರೆ ವೈಯಕ್ತಿಕವಾಗಿ ಮನವರಿಕೆಯಾಗುವುದಲ್ಲ, ಸಂವಿಧಾನಕವಾಗಿ ಮನವರಿಕೆಯಾದರೆ ಎಂದರ್ಥ. ನ್ಯಾಯಾಲಯ ಸ್ಪೀಕರ್ ಮೇಲೆ ನಂಬಿಕೆ ಇಡಬೇಕು. ಸ್ಪೀಕರ್ ತಕ್ಷಣವೇ ತೀರ್ಮಾನಿಸಿ ಎಂದು ಹೇಳುತ್ತೀರಿ. ಆದರೆ ಸ್ಪೀಕರ್ ಹಾಗೆ ನಿರ್ಧರಿಸಲು ಸಾಧ್ಯವಿಲ್ಲ. ರಾಜೀನಾಮೆ ನೀಡಿರುವ ಹಿಂದಿನ ಉದ್ದೇಶವನ್ನು ಸ್ಪೀಕರ್ ಗ್ರಹಿಸಬೇಕು. ಸ್ವ ಇಚ್ಛೆ ಮತ್ತು ನೈಜತೆ ಬಗ್ಗೆ ಸ್ಪೀಕರ್ ಪರಿಶೀಲಿಸಬೇಕು. 10ನೇ ಪರಿಚ್ಛೇದದಡಿ ನಾವು ಬರಲ್ಲ ಎಂದು ಶಾಸಕರು ತೀರ್ಮಾನಿಸುವಂತಿಲ್ಲ. 10ನ ಪರಿಚ್ಛೇದ ಶಾಸಕರ ಅನರ್ಹತೆ ಬಗ್ಗೆ ಹೇಳುತ್ತೆ. ಇದರ ಬಗ್ಗೆ ಸ್ಪೀಕರ್ ನಿರ್ಧರಿಸಬೇಕು. ರಾಜೀನಾಮೆ ಬಗ್ಗೆ ವಿಚಾರಣೆ ನಡೆಸಲು ಸ್ಪೀಕರ್ ಗೆ ಸಮಯಾವಕಾಶದ ಅಗತ್ಯವಿದೆ ಎಂದು ಧವನ್ ವಾದಿಸಿದರು.

ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಹಣಕಾಸು ವಿಧೇಯಕ ಪಾಸ್ ಆಗಬೇಕಿದೆ. ಈ ಪರಿಸ್ಥಿತಿಯನ್ನು ಶಾಸಕರು ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಗುರುವಾರ ವಿಶ್ವಾಸಮತ ಯಾಚನೆ ನಡೆಯಲಿದೆ. ಅಂದು ಮೂರು ಸಾಲಿನ ವಿಪ್ ಜಾರಿಯಲ್ಲಿರಲಿದೆ. ಇಂತಹ ಸಂದರ್ಭದಲ್ಲಿ ಶಾಸಕರು ಸರ್ಕಾರವನ್ನು ಉರುಳಿಸುವ ಯೋಜನೆ ಹಾಕಿದ್ದಾರೆ. ಇದು ಸೀಮಿತ ಚರ್ಚೆಗೆ ಒಳಗಾಗಬಾರದು. ಇದರ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಬೇಕಾಗಿದೆ ಎಂದು ಸಿಎಂ ಪರ ವಕೀಲರಾದ ರಾಜೀವ್ ಧವನ್ ತಮ್ಮ ವಾದ ಮುಕ್ತಾಯಗೊಳಿಸಿದರು.

ಅಲ್ಪ ಮತದ ಸರ್ಕಾರ ಉಳಿಸಲು ಸ್ಪೀಕರ್ ಆಸರೆ:
ರಾಜೀನಾಮೆಯನ್ನು ಅನರ್ಹತೆಯೊಂದಿಗೆ ಬೆರೆಸಲಾಗಿದೆ. ರಾಜೀನಾಮೆ ನೀಡಿ ಬೇಕಾದ ಹಾಗೆ ಬದುಕುವ ಹಕ್ಕನ್ನು ಕಿತ್ತುಕೊಂಡಿದ್ದಾರೆ ಎಂದು ಅತೃಪ್ತ ಶಾಸಕರ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ರಾಜೀನಾಮೆಯನ್ನು ಸ್ಪೀಕರ್ ತಕ್ಷಣವೇ ಸ್ವೀಕರಿಸಬೇಕಿದೆ. ಸ್ಪೀಕರ್ ಸಬೂಬುಗಳನ್ನು ನೀಡುತ್ತ ರಾಜೀನಾಮೆ ಅಂಗೀಕಾರ ವಿಷಯದಲ್ಲಿ ವಿಳಂಬ ಮಾಡಬಾರದು. ಶಾಸಕರ ಮೇಲೆ ಸರ್ಕಾರದ ಪರ ಮತ ಚಲಾಯಿಸುವ ಒತ್ತಡ ಸೃಷ್ಟಿಸಲಾಗುತ್ತಿದೆ. ಅಲ್ಪಮತದ ಸರ್ಕಾರವನ್ನು ಉಳಿಸಲು ಸ್ಪೀಕರ್ ಸಹಕರಿಸುತ್ತಿದ್ದಾರೆ ಎಂದು ವಾದಿಸಿದರು.

ಸುದೀರ್ಘ 3 ಗಂಟೆ 45 ನಿಮಿಷ ವಾದ-ಪ್ರತಿವಾದವನ್ನು ಆಲಿಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಬುಧವಾರ ಬೆಳಿಗ್ಗೆ 10:30ಕ್ಕೆ ಆದೇಶವನ್ನು ಕಾಯ್ದಿರಿಸಿದೆ.

Trending News