ನವ ದೆಹಲಿ : ವಿವಿಪ್ಯಾಟ್‌ ದಾಖಲೆಯನ್ನು ಇವಿಎಂ ಮತಗಳೊಂದಿಗೆ ಪರಾಮರ್ಶಿಸಬೇಕು ಎಂಬ ಕಾಂಗ್ರೆಸ್‌ ಪಕ್ಷ ದ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದ್ದು ಪಕ್ಷಕ್ಕೆ ಇದೊಂದು ದೊಡ್ಡ ಹಿನ್ನಡೆ ಮತ್ತು ಮುಖಭಂಗವಾಗಿದೆ.


COMMERCIAL BREAK
SCROLL TO CONTINUE READING

ಶೇ.25ರಷ್ಟು ವಿವಿಪ್ಯಾಟ್‌ ಕಾಗದ ದಾಖಲೆಯನ್ನು ಎವಿಎಂ ಓಟ್‌ಗಳ ಜತೆಗೆ ತಾಳೆ ಮಾಡಿ ಮತ ಎಣಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕಾಂಗ್ರೆಸ್‌ ಪಕ್ಷ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.


ಆದರೆ, ಕಾಂಗ್ರೆಸ್‌ ಪಕ್ಷ ಸಲ್ಲಿಸಿರುವ ಈ ಮನವಿಯಲ್ಲಿ ಯಾವುದೇ ಹುರುಳಿಲ್ಲ ಮತ್ತು ಇದು ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಹೇಳಿ ಈ ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು‌, "ಗುಜರಾತ್‌ ಕಾಂಗ್ರೆಸ್‌ ಈ ಬಗ್ಗೆ ಚುನಾವಣಾ ಸುಧಾರಣೆಗಳನ್ನು ಕೋರಿ ರಿಟ್‌ ಅರ್ಜಿ ಸಲ್ಲಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಬರಬೇಕು' ಎಂದು ಹೇಳಿತು.


ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷದ ಗುಜರಾತ್‌ ಘಟಕ ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು. ಇವಿಎಂ ಗೆ ಬ್ಲೂ ಟೂತ್‌ ಉಪಕರಣವನ್ನು ಜೋಡಿಸಲಾಗಿದೆ ಎಂದೂ ಅದು ದೂರಿತ್ತು. 


ಇವಿಎಂ ತಿರುಚುವಿಕೆ ಕುರಿತಾದ ಕಾಂಗ್ರೆಸ್‌ ಪಕ್ಷದ ಆರೋಪವನ್ನು ಸಾರಾಸಗಟು ತಿರಸ್ಕರಿಸಿದ ಬಿಜೆಪಿ, "ಚುನಾವಣೆಯಲ್ಲಿ ಪರಾಭವಗೊಳ್ಳುವ ಭೀತಿಯಲ್ಲಿ ಕಾಂಗ್ರೆಸ್‌ ಈ ನೆಪ ಹೂಡಿದೆ'' ಎಂದು ಟೀಕಿಸಿತ್ತು.