ಆಧಾರ್ ಇಲ್ಲವೆಂದು ಮಕ್ಕಳ ಪ್ರವೇಶವನ್ನು ಶಾಲೆಗಳು ನಿರಾಕರಿಸುವಂತಿಲ್ಲ: ಯುಐಡಿಎಐ
ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಯುಐಡಿಎಐ ಸುತ್ತೋಲೆ ಹೊರಡಿಸಿದ್ದು, ಆಧಾರ್ ಇಲ್ಲದ ಕಾರಣಕ್ಕೆ ಮಕ್ಕಳಿಗೆ ಪ್ರವೇಶ ನಿರಾಕರಿಸುವುದು ಅಮಾನ್ಯ ಎಂದಿದೆ.
ನವದೆಹಲಿ: ಆಧಾರ್ ಕಾರ್ಡ್ ಹೊಂದಿಲ್ಲವೆಂಬ ಕಾರಣಕ್ಕೆ ಶಾಲೆಗಳು ಮಕ್ಕಳ ಪ್ರವೇಶಾತಿಯನ್ನು ನಿರಾಕರಿಸುವಂತಿಲ್ಲ ಎಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಕೇವಲ ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಲು ಆಡಳಿತ ಮಂಡಳಿಗಳು ನಿರಾಕರಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದನ್ನು ಯುಐಡಿಎಐ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಯುಐಡಿಎಐ ಸುತ್ತೋಲೆ ಹೊರಡಿಸಿದ್ದು, ಆಧಾರ್ ಇಲ್ಲದ ಕಾರಣಕ್ಕೆ ಮಕ್ಕಳಿಗೆ ಪ್ರವೇಶ ನಿರಾಕರಿಸುವುದು ಅಮಾನ್ಯ. ಇದನ್ನು ಕಾನೂನು ಒಪ್ಪುವುದಿಲ್ಲ. ಆಧಾರ್ ಕಾರಣದಿಂದ ಮಕ್ಕಳಿಗೆ ಸಮಸ್ಯೆಗಳಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಹಾಗೆಯೇ ಆಧಾರ್ ಇಲ್ಲದ ಮಕ್ಕಳಿಗೆ ಪ್ರವೇಶ ನೀಡುವುದಕ್ಕೆ ಶಾಲೆಗಳು ನಿರಾಕರಿಸುವಂತಿಲ್ಲ ಎಂದು ಸೂಚನೆ ನೀಡಿದೆ.
ಅಷ್ಟೇ ಅಲ್ಲದೆ ಬ್ಯಾಂಕುಗಳು, ಅಂಚೆ ಕಚೇರಿಗಳು, ರಾಜ್ಯ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಶಾಲಾ ಆಡಳಿತ ಮಂಡಳಿಗಳು ಆಧಾರ್ ಕಾರ್ಡ್'ಗೆ ಅರ್ಜಿ ಸಲ್ಲಿಸಲು ಕ್ಯಾಂಪ್'ಗಳನ್ನೂ ಏರ್ಪಡಿಸುವಂತೆ ಸೂಚನೆ ನೀಡಿದೆ.