ಹಿರಿಯ ಕಾಂಗ್ರೆಸ್ ನಾಯಕ ಗುರುದಾಸ್ ಕಾಮತ್ ನಿಧನ
ಗುರುದಾಸ್ ಕಾಮತ್ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು.
ನವದೆಹಲಿ: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ಹಿರಿಯ ನಾಯಕ ಗುರುದಾಸ್ ಕಾಮತ್ ಬುಧವಾರ ದೆಹಲಿ ಆಸ್ಪತ್ರೆಯಲ್ಲಿ ತಮ್ಮ 63 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಗುರುದಾಸ್ ಕಾಮತ್ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಅವರು 2009 ರಿಂದ 2014 ರವರೆಗೂ ವಾಯುವ್ಯ ಮುಂಬೈಯ ಸಂಸತ್ ಸದಸ್ಯರಾಗಿದ್ದರು. ಇದಕ್ಕೆ ಮೊದಲು ಅವರು 1984, 1991, 1998 ಮತ್ತು 2004 ರಲ್ಲಿ ಈಶಾನ್ಯ ಮುಂಬೈ ಕ್ಷೇತ್ರದಿಂದ ಆಯ್ಕೆಯಾದರು. ಕಾಮತ್ ಮನ್ಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದರು.
ಕಾಂಗ್ರೆಸ್ ಪಕ್ಷವು ಕಾಮತ್ ಅವರಿಗೆ ಗುಜರಾತ್, ರಾಜಸ್ಥಾನ್, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ಡಿಯೂ ಉಸ್ತುವಾರಿ ವಹಿಸಿತ್ತು. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುರುದಾಸ್ ಕಾಮತ್ ಕಳೆದ ಏಪ್ರಿಲ್ನಲ್ಲಿ ತನ್ನ ಎಲ್ಲಾ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ರಾಜಕೀಯದಲ್ಲಿ ನಿವೃತ್ತಿಯ ಬಗ್ಗೆ ಹೇಳಿಕೆ ನೀಡುತ್ತಾ ಕಾಮತ್, "ನಾನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಬುಧವಾರ (ಏಪ್ರಿಲ್ 19) ಭೇಟಿ ಮಾಡಿದ್ದು ತನ್ನ ಎಲ್ಲ ಜವಾಬ್ದಾರಿಗಳಿಂದ ನಿವೃತ್ತಿ ಹೊಂದುವ ಬಗ್ಗೆ ಮಾತನಾಡಿದೆ" ಎಂದು ಹೇಳಿದ್ದರು".