ನವದೆಹಲಿ: ಆರು ವರ್ಷಗಳ ಹಿಂದೆ ಪುಣೆಯಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆ ಮಾಡಿದ ಆರೋಪಿ ಕರ್ನಾಟಕ ಪೊಲೀಸರಿಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ತಪ್ಪೊಪ್ಪಿಕೊಂಡಿರುವ ವ್ಯಕ್ತಿಯನ್ನು 67ವರ್ಷದ ಶರದ್ ಕಲಾಸ್ಕರ್ ಎಂದು ಗುರುತಿಸಲಾಗಿದೆ.  


COMMERCIAL BREAK
SCROLL TO CONTINUE READING

ನರೇಂದ್ರ ದಾಬೋಲ್ಕರ್ ಅವರಿಗೆ ಎರಡು ಬಾರಿಗೆ ಗುಂಡು ಹಾರಿಸಿರುವುದಾಗಿ ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ಒಮ್ಮೆ ಹಿಂದಿನಿಂದ ತಲೆಗೆ, ಮತ್ತು ಅವರು ನೆಲಕ್ಕೆ  ಬಿದ್ದಾಗ, ಬಲಗಣ್ಣಿನ ಮೇಲೆ ಒಮ್ಮೆ ಗುಂಡು ಹಾರಿಸಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಈಗ 14 ಪುಟಗಳ ತಪ್ಪೊಪ್ಪಿಗೆ ಪ್ರತಿಯಲ್ಲಿ ಶರದ್ ಕಲಾಸ್ಕರ್ ಗೋವಿಂದ್ ಪನ್ಸರೆ ಮತ್ತು ಪತ್ರಕರ್ತ ಗೌರಿ ಲಂಕೇಶ್ ಅವರ ಇತರ ಎರಡು ಕೊಲೆಗಳಿಗೆ ಸಂಬಂಧ ಹೊಂದಿದ್ದಾರೆಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.


ಆಗಸ್ಟ್ 2013  ಪುಣೆಯಲ್ಲಿ ನರೇಂದ್ರ ದಾಭೋಲ್ಕರ್  ಹತ್ಯೆಯಾಗಿದ್ದರು. ಇದಾದ ನಂತರ 2015 ರ ಫೆಬ್ರವರಿಯಲ್ಲಿ ಗೋವಿಂದ್ ಪನ್ಸಾರೆ ಮತ್ತು ಅದೇ ವರ್ಷ ಆಗಸ್ಟ್ ನಲ್ಲಿ ಎಂ.ಎಂ.ಕಲ್ಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 2018 ರಲ್ಲಿ ಬಂಧನಕ್ಕೊಳಗಾದ ಶರದ್ ಕಲಾಸ್ಕರ್ ವಿರುದ್ಧ ಕೊಲೆ ಮತ್ತು ಪಿತೂರಿ ಆರೋಪದ ಕಾರಣಕ್ಕೆ ಜೈಲಿನಲ್ಲಿದ್ದಾನೆ. ಪಾಲ್ಘರ್ ಜಿಲ್ಲೆಯ ನಲ್ಲಸೋಪರಾದಲ್ಲಿ ಪಿಸ್ತೂಲ್ ಉತ್ಪಾದನಾ ಘಟಕದಲ್ಲಿ ನಡೆದ ದಾಳಿಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಶರದ್ ಕಲಾಸ್ಕರ್ ಅವರನ್ನು ಬಂಧಿಸಿತ್ತು.