ನವದೆಹಲಿ: ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರ ಅತಿಥಿಯಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ನನ್ನು ಇಂದು ದೆಹಲಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.  ಈ ವಿಚಾರಣೆ ವೇಳೆ ಪೊಲೀಸರು ಆತನನ್ನು ವಿಡಿಯೋಗಳ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಆತ ತನ್ನ ಕುರಿತಾದ ಎಲ್ಲ ವಿಡಿಯೋಗಳು ನೈಜತೆಯಿಂದ ಕೂಡಿದ್ದು, ಅವುಗಳನ್ನು ತಿರುಚಲಾಗಿಲ್ಲ ಎಂದು ಒಪ್ಪಿಕೊಂಡಿದ್ದಾನೆ.


COMMERCIAL BREAK
SCROLL TO CONTINUE READING

ಅಷ್ಟೇ ಅಲ್ಲ ಈಶಾನ್ಯ ಭಾಗವನ್ನು ಭಾರತದಿಂದ ಬೇರ್ಪಡಿಸುವುದಾಗಿ ಆತ ನೀಡಿರುವ ಹೇಳಿಕೆ ಬಿಸಿ ವಾತಾವರಣದ ಸಂದರ್ಭದಲ್ಲಿ ನೀಡಿರುವ ಹೇಳಿಕೆಯಾಗಿದೆ ಎಂದೂ ಕೂಡ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ವೈರಲ್ ಆಗಿರುವ ಈ ವಿಡಿಯೋಗಳಲ್ಲಿ ತಮ್ಮ ಸಂಪೂರ್ಣ ಭಾಷಣವನ್ನು ತೋರಿಸಲಾಗಿಲ್ಲ ಎಂದು ಆತ ಆರೋಪಿಸಿದ್ದಾನೆ.


ಈ ಕುರಿತು ANI ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ ಮೂಲಗಳು " ಶಾರ್ಜೀಲ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಆತ ಓರ್ವ ಮೂಲಭೂತವಾದಿಯಾಗಿದ್ದು, ಭಾರತ ಒಂದು ಇಸ್ಲಾಮಿಕ್ ರಾಷ್ಟ್ರವಾಗಬೇಕು ಎಂದು ಹೇಳಿಕೆ ನೀಡಿದ್ದಾನೆ" ಎಂದು ಹೇಳಿವೆ. ಇದೇ ವೇಳೆ ತಮ್ಮ ಯಾವುದೇ ವಿಡಿಯೋಗಳ ಜೊತೆ ಯಾವುದೇ ರೀತಿಯ ಟ್ಯಾಂಪರಿಂಗ್ ನಡೆಸಲಾಗಿಲ್ಲ ಎಂದು ಹೇಳಿದ್ದಾನೆ.



ಸದ್ಯ ದೆಹಲಿ ಪೊಲೀಸರು, ಇಸ್ಲಾಮಿಕ್ ಯೂಥ್ ಫೆಡರೇಶನ್ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳ ಜೊತೆ  ಶಾರ್ಜೀಲ್ ಇಮಾಮ್ ಹೊಂದಿರುವ ಸಂಪರ್ಕದ ಕುರಿತು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ತಾನು ಮಾಡಿರುವ ಪ್ರಚೋದಕ ಭಾಷಣದಿಂದ ಬಂಧನಕ್ಕೋಳಗಾಗಬಹುದು ಎಂದು ಆತನಿಗೆ ಮುಂಚಿತವಾಗಿಯೇ ತಿಳಿದಿದ್ದು, ಆತನ ಭಾಷಣ ಹಾಗೂ ಬಂಧನದ ಬಗ್ಗೆ ಆತನಿಗೆ ಯಾವುದೇ ರೀತಿಯ ಪಶ್ಚಾತಾಪವಿಲ್ಲ ಎಂದು ಹೇಳಿದ್ದಾನೆ. ಸದ್ಯ ಆತನಿಗೆ ಸಂಬಧಿಸಿದ ಎಲ್ಲ ವಿಡಿಯೋಗಳನ್ನು ಫೋರೆನ್ಸಿಕ್ ಸೈನ್ಸ್ ಲ್ಯಾಬ್ ಗೆ ಕಳುಹಿಸಲಾಗಿದ್ದು, ಆತನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ.