ರಾಹುಲ್ ಗಾಂಧಿ 2019ರ ಚುನಾವಣೆಯ ಪ್ರಧಾನ ಮಂತ್ರಿ ಅಭ್ಯರ್ಥಿ ಆಗದೇ ಇರಬಹುದು: ಶಶಿ ತರೂರ್
ಕಾಂಗ್ರೆಸ್‌ಗೆ ಸಮಷ್ಟೀ ನಾಯಕತ್ವದಲ್ಲಿ ನಂಬಿಕೆ ಇದೆಯೇ ಹೊರತು, ಏಕ ವ್ಯಕ್ತಿ ಕೇಂದ್ರಿಕೃತವಾದ ನಾಯಕತ್ವದಲ್ಲಿ ಅಲ್ಲ ಎಂದು ತರೂರ್ ಸ್ಪಷ್ಟಪಡಿಸಿದರು.
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆ ಅಭ್ಯರ್ಥಿ ಆಗದೇ ಇರಬಹುದು ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಇತರ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಿದೆ; ಆದರೆ ಪ್ರಧಾನಿ ಹುದ್ದೆ ಅಭ್ಯರ್ಥಿಯನ್ನು ಎಲ್ಲ ಪಕ್ಷಗಳೂ ಒಟ್ಟಾಗಿ ನಿರ್ಧರಿಸಲಿದೆ ಎಂದು ಕೇರಳ ಸಂಸದ ಶಶಿ ತರೂರ್ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಜೆಪಿ ಹಾಗಲ್ಲ; ಕಾಂಗ್ರೆಸ್ ನಾಯಕತ್ವದ ಪರಿಕಲ್ಪನೆಯು ವಿಶಾಲ ಅಡಿಪಾಯವನ್ನು ಹೊಂದಿದೆ. ಇಲ್ಲಿ ಹಿರಿಯ ನಾಯಕರು ಮತ್ತು ಪ್ರತಿಭಾವಂತರಾದ ಪ್ರಣವ್ ಮುಖರ್ಜಿ, ಪಿ ಚಿದಂಬರಂ ಅವರಂತಹ ದಕ್ಷ ನಾಯಕರಿದ್ದಾರೆ ಅವರು ಪಕ್ಷದ ಹೊಣೆ ಹೊರಲು ಸಿದ್ಧರಾಗಿದ್ದಾರೆ. ಆದರೆ ಕಾಂಗ್ರೆಸ್‌ಗೆ ಸಮಷ್ಟೀ ನಾಯಕತ್ವದಲ್ಲಿ ನಂಬಿಕೆ ಇದೆಯೇ ಹೊರತು, ಏಕ ವ್ಯಕ್ತಿ ಕೇಂದ್ರಿಕೃತವಾದ ನಾಯಕತ್ವದಲ್ಲಿ ಅಲ್ಲ. ಆದರೂ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರ ನೆಚ್ಚಿನ, ಪ್ರಶ್ನಾತೀತ ನಾಯಕ ಎಂದು ತರೂರ್ ಸ್ಪಷ್ಟಪಡಿಸಿದರು.