ಶಿರಡಿ: ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಶಿರಡಿ ಸಾಯಿಬಾಬಾ ಹೆಸರು ಸೇರಿಸಲು ವ್ಯಕ್ತಿಯೋರ್ವ ಪ್ರಯತ್ನಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಹಮದ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಚುನಾವಣಾ ಆಯೋಗದ ಆನ್ಲೈನ್ ವೆಬ್ಸೈಟ್ ಮೂಲಕ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಸಂದರ್ಭದಲ್ಲಿ, ಶಿರಡಿ ಸಾಯಿಬಾಬಾ ಹೆಸರನ್ನು, ದೇವಾಲಯದ ವಿಳಾಸದೊಂದಿಗೆ ಸೇರಿಸಲು ಪ್ರಯತ್ನಿಸಿರುವ ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ವಿಚಾರದ ಬಗ್ಗೆ ತಹಶೀಲ್ದಾರ್ ಸಚಿನ್ ಮಸ್ಕೆ ಅವರು ಬುಧವಾರ ಪೊಲೀಸರಿಗೆ ದೂರು ನೀಡಿದ್ದು, ಐಟಿ ಕಾಯ್ದೆಯ ಅನ್ವಯ ಅನಾಮಧೇಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. 


"2017 ರ ಡಿಸೆಂಬರ್ 4 ರಂದು ಅನಾಮಧೇಯ ವ್ಯಕ್ತಿಯೊಬ್ಬ ಸಾಯಿಬಾಬ ಹೆಸರಿನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾನೆ. ಸಾಯಿಬಾಬಾ ವಯಸ್ಸನ್ನು 24 ಎಂದೂ, ತಂದೆಯ ಹೆಸರನ್ನು ರಾಮ್ ಎಂದು ನಮೂದಿಸಲಾಗಿದ್ದು, ಶಿರಡಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಸಿದ್ದಾನೆ. ಇದೀಗ ಚುನಾವಣಾ ಆಯೋಗ ಅರ್ಜಿ ಪರಿಶೀಲನೆ ಸಂದರ್ಭದಲ್ಲಿ ಈ ವಿಚಿತ್ರ ಅರ್ಜಿ ಬೆಳಕಿಗೆ ಬಂದಿದ್ದು, ಅನಾಮಧೇಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ" ಎಂದು ರಹ್ತಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅರುಣ್ ಪರ್ದೇಶಿ ತಿಳಿಸಿದ್ದಾರೆ.