ಖಾತೆ ಹಂಚಿಕೆಗೆ ಅಸಮಾಧಾನಗೊಂಡು ಕ್ಯಾಬಿನೆಟ್ ತೊರೆದ ಶಿವಸೇನಾ ಶಾಸಕ
ಶಿವಸೇನೆ ಮುಖಂಡ ಅಬ್ದುಲ್ ಸತ್ತಾರ್ ಮಹಾರಾಷ್ಟ್ರದ ಮಹಾ ವಿಕಾಸ್ ಅಗಾಡಿ ಸರ್ಕಾರದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಶಿವಸೇನೆ ಮುಖಂಡ ಅಬ್ದುಲ್ ಸತ್ತಾರ್ ಮಹಾರಾಷ್ಟ್ರದ ಮಹಾ ವಿಕಾಸ್ ಅಗಾಡಿ ಸರ್ಕಾರದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಕಾಂಗ್ರೆಸ್ ನಿಂದ ಶಿವಸೇನೆ ಸೇರಿದ್ದ ರಾಜಕಾರಣಿ, ರಾಜ್ಯ ಸಚಿವ ಸಂಪುಟದಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಔರಂಗಾಬಾದ್ ನಾಯಕನ ನಿರ್ಧಾರವನ್ನು ಅವರ ಪಕ್ಷ ಇನ್ನೂ ಒಪ್ಪಿಕೊಂಡಿಲ್ಲ. 'ನಾವು ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ' ಎಂದು ಶಿವಸೇನೆ ಹಿರಿಯ ಮುಖಂಡ ಏಕ್ನಾಥ್ ಶಿಂಧೆ ಹೇಳಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಬ್ದುಲ್ ಸತ್ತಾರ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಸಂಜಯ್ ರೌತ್ ಹೇಳಿದ್ದಾರೆ.'ಕ್ಯಾಬಿನೆಟ್ ವಿಸ್ತರಣೆಯನ್ನು ಕೈಗೆತ್ತಿಕೊಂಡಾಗಲೆಲ್ಲಾ, ಕೆಲವು ನಾಯಕರು ತಮ್ಮ ಆಯ್ಕೆಯ ಸ್ಥಾನವನ್ನು ಪಡೆಯದಿರುವ ಬಗ್ಗೆ ನಿರಾಶರಾಗುತ್ತಾರೆ. ಆದರೆ ಇದು ಮಹಾ ವಿಕಾಸ್ ಅಗಾದಿಯ ಸರ್ಕಾರವೇ ಹೊರತು ಶಿವಸೇನೆ ಅಲ್ಲ ಎಂದು ಅವರು ಅರ್ಥ ಮಾಡಿಕೊಳ್ಳಬೇಕು" ಎಂದು ಅವರು ಹೇಳಿದರು, ಅಬ್ದುಲ್ ಸತ್ತಾರ್ ಅವರು ಹೊರಗಿನಿಂದ ಬಂದಿದ್ದರೂ ಸಹ ಕ್ಯಾಬಿನೆಟ್ನಲ್ಲಿ ಸೇರಿಸಲಾಗಿದೆ. ಉದ್ಧವ್ ಠಾಕ್ರೆ ಅವರೊಂದಿಗಿನ ಮಾತುಕತೆಯ ನಂತರ ಅಬ್ದುಲ್ ಸತ್ತಾರ್ ವಿಚಾರ ಇತ್ಯರ್ಥವಾಗಲಿದೆ ಎಂದು ರೌತ್ ಹೇಳಿದರು.
ಕಾಂಗ್ರೆಸ್ ಮಾಜಿ ಶಾಸಕ ಅಬ್ದುಲ್ ಸತ್ತಾರ್ ಇತ್ತೀಚೆಗೆ ಮಹಾರಾಷ್ಟ್ರದ ತ್ರಿಪಕ್ಷೀಯ ಮೈತ್ರಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ಮಗ-ಸಮೀರ್ ಸತ್ತಾರ್ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.'ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅವರು ಮಾತ್ರ ಈ ಬಗ್ಗೆ ಮಾತನಾಡಬಲ್ಲರು, ಮತ್ತು ಅವರು ಶೀಘ್ರದಲ್ಲೇ ಮಾತನಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಕಾಯ್ದುನೋಡುವುದು ಉತ್ತಮ ಎಂದು ಅವರು ತಿಳಿಸಿದರು.
ಈ ಹಿಂದೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಅಲ್ಲದ ಸರ್ಕಾರವನ್ನು ರಚಿಸಲು ಶಿವಸೇನೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿದ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನಗಳನ್ನು ನೀಡದಿರುವ ಬಗ್ಗೆ ಹಲವಾರು ಕಾಂಗ್ರೆಸ್ ನಾಯಕರು ನಿರಾಶೆ ವ್ಯಕ್ತಪಡಿಸಿದ್ದರು.ಡಿಸೆಂಬರ್ 30 ರಂದು ರಾಜ್ಯ ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜಕಾರಣಿಗಳಲ್ಲಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಮತ್ತು ಇತರ 34 ನಾಯಕರು ಸೇರಿದ್ದಾರೆ.