ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ರಹಸ್ಯ ಬಿಚ್ಚಿಟ್ಟ ಉದ್ಧವ್ ಠಾಕ್ರೆ
ತಮ್ಮ ಪಕ್ಷದ ಅಭ್ಯರ್ಥಿ ಚಂದ್ರಕಾಂತ್ ಖೈರ್ ಅವರ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ ತಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣವನ್ನು ತಿಳಿಸಿದರು.
ಔರಂಗಾಬಾದ್: ತಮ್ಮ ಪಕ್ಷ(ಶಿವಸೇನೆ) ಪಾಕಿಸ್ತಾನವನ್ನು ಆಕ್ರಮಣ ಮಾಡುವ ಧೈರ್ಯ ಹೊಂದಿರುವ ಪ್ರಧಾನಮಂತ್ರಿಯನ್ನು ಬಯಸಿದ್ದು ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಜೊತೆಗೆ ಮೈತ್ರಿ ಮಾಡಿಕೊಂಡಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ರಹಸ್ಯ ಬಿಚ್ಚಿಟ್ಟಿದ್ದಾರೆ.
ತಮ್ಮ ಪಕ್ಷದ ಅಭ್ಯರ್ಥಿ ಚಂದ್ರಕಾಂತ್ ಖೈರ್ ಅವರ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, "ನಾವು ಪಾಕಿಸ್ತಾನದ ವಿರುದ್ಧ ಸಮರ್ಥವಾಗಿ ಹೋರಾಡುವ, ಶತ್ರು ರಾಷ್ಟ್ರದ ಮೇಲೆ ಆಕ್ರಮಣ ಮಾಡುವ ಪ್ರಧಾನ ಮಂತ್ರಿಯನ್ನು ಬಯಸಿದ್ದೇವೆ. ಇದಲ್ಲದೆ ನಾನು ಮರಾಠವಾಡ ಮತ್ತು ಮಹಾರಾಷ್ಟ್ರದ ಕಲ್ಯಾಣಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇನೆ" ಎಂದು ತಿಳಿಸಿದರು.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ತೆಗೆದುಹಾಕಲು ಕಾಂಗ್ರೆಸ್ ಬಯಸುವುದಿಲ್ಲ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲೂ ಕೂಡ ಭಾರತದ ಉಳಿದ ರಾಜ್ಯಗಳಂತೆ ಕಾನೂನುಗಳು ಅನ್ವಯವಾಗಬೇಕೆಂಬುದನ್ನು ಅವರ ಪಕ್ಷ ಬಯಸಿದೆ ಎಂದು ಅವರು ಹೇಳಿದರು.
ಅಸ್ದುದ್ದೀನ್ ಓವೈಸಿ ಅವರನ್ನು ಗುರಿಯಾಗಿಸಿ ಮಾತನಾಡಿದ ಠಾಕ್ರೆ, ತಾವು ಮುಸಲ್ಮಾನರನ್ನು ಶತ್ರುಗಳೆಂದು ಪರಿಗಣಿಸುವುದಿಲ್ಲ ಎಂದರು.