VIDEO: ರಾಷ್ಟ್ರ ರಾಜಧಾನಿಯಲ್ಲಿ ಗ್ಯಾಂಗ್ ವಾರ್, ಶೂಟೌಟ್ಗೆ ಇಬ್ಬರು ಬಲಿ
ದೆಹಲಿಯ ದ್ವಾರಕಾ ಮೋರ್ ಮೆಟ್ರೋ ನಿಲ್ದಾಣದ ಬಳಿ ಭಾನುವಾರ ಸಂಜೆ ನಡೆದ ಶೂಟೌಟ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ನವದೆಹಲಿ: ಎರಡು ವಿರೋಧಿ ರೌಡಿ ಗ್ಯಾಂಗ್ ಗಳ ನಡುವೆ ನಡೆದ ಶೂಟೌಟ್‌ನಲ್ಲಿ ಇಬ್ಬರು ಬಲಿಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕಾ ಮೋರ್ ಮೆಟ್ರೋ ನಿಲ್ದಾಣದ ಬಳಿ ಭಾನುವಾರ ಸಂಜೆ ನಡೆದಿದೆ.
ದೆಹಲಿಯ ಜನಜಂಗುಳಿ ಪ್ರದೇಶವಾದ ದ್ವಾರಕಾ ಮೋರ್ ನ ಮೆಟ್ರೋ ನಿಲ್ದಾಣದ ಬಳಿ ಭಾನುವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಕಾರಿನಲ್ಲಿ ಬಂದ ಕೆಲವು ದುಷ್ಕರ್ಮಿಗಳು ಬಿಳಿ ರಿಟ್ಝ್ ಕಾರಿನ ಮೇಲೆ ಗುಂಡು ಹಾರಿಸಿದರು. ಸುಮಾರು 15 ಸುತ್ತುಗಳ ಗುಂಡು ಹಾರಿಸಿದರು. ಈ ವೇಳೆ ಬಿಳಿ ರಿಟ್ಝ್ ಕಾರಿನಲ್ಲಿದ್ದ ನವಾಡದ ಪ್ರವೀಣ್ ಗೆಹ್ಲೋಟ್ ಗುಂಡೇಟಿಗೆ ಬಲಿಯಾಗಿದ್ದಾರೆ.
ಪೊಲೀಸರ ಪ್ರಕಾರ, ಗುಂಡಿನ ಸದ್ದು ಕೇಳಿದೊಡನೆ ರಸ್ತೆಯ ಇನ್ನೊಂದು ಭಾಗದಲ್ಲಿ ನಿಂತಿದ್ದ ಪಿಸಿಆರ್ ವ್ಯಾನ್ನಲ್ಲಿ ಪೊಲೀಸರು ಗ್ಯಾಂಗ್ ಸ್ಟರ್ ಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ದುಷ್ಕರ್ಮಿಯೊಬ್ಬ ಮೃತಪಟ್ಟಿದ್ದು, ಆತನನ್ನು ವಿಕಾಸ್ ದಲಾಲ್ ಎಂದು ಗುರುತಿಸಲಾಗಿದೆ. ಇನ್ನುಳಿದ ದುಷ್ಕರ್ಮಿಗಳು ಪರಾರಿಯಾಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಂಗ್ ಸ್ಟರ್ ಗಳ ಈ ಘರ್ಷಣೆಗೆ ಆಸ್ತಿ ವಿವಾದ ಕಾರಣ. ಎರಡೂ ಗ್ಯಾಂಗ್ ಸ್ಟರ್ ಗಳ ಮೇಲೆ ಕೊಲೆ, ದರೋಡೆ, ಹಣ ಸುಲಿಗೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.