ವಿರೋಧಪಕ್ಷಗಳಿಗೆ ಬಿಗ್ ಶಾಕ್; ಚುನಾವಣೆಗೂ ಮುನ್ನ 6 ಶಾಸಕರು ಬಿಜೆಪಿಗೆ ಸೇರ್ಪಡೆ
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಆರು ಶಾಸಕರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ರಾಂಚಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಆರು ಶಾಸಕರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದಿಂದ ಬಹರಗೋರ ಶಾಸಕ ಕುನಾಲ್ ಸಾರಂಗಿ, ಮಂಡು ಶಾಸಕ ಜೆ.ಪಿ.ಭಾಯಿ ಪಟೇಲ್, ಬಿಶುನ್‌ಪುರ ಶಾಸಕ ಚಮ್ರಾ ಲಿಂಡಾ ಮತ್ತು ನವ ಜವಾನ್ ಸಂಘರ್ಷ ಮೋರ್ಚಾದ ಭವನಾಥಪುರ ಶಾಸಕ ಭಾನು ಪ್ರತಾಪ್ ಶಾಹಿ ಮತ್ತು ಕಾಂಗ್ರೆಸ್ ನ ಲಹರ್ದಗ್ಗ ಶಾಸಕ ಸುಖದೇವ್ ಭಗತ್ ಮತ್ತು ಬಾರ್ಹಿ ಶಾಸಕ ಮನೋಜ್ ಯಾದವ್ ಅವರು ಇಂದು ಮುಖ್ಯಮಂತ್ರಿ ರಘುವರ್ ದಾಸ್ ಅವರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಜಾರ್ಖಂಡ್ ಸಿಎಂ ರಘುವರ್ ದಾಸ್ ಅವರು, ಬಿಜೆಪಿಗೆ ಸೇರಿದ ಈ ನಾಯಕರು ತಮ್ಮಗೋಸ್ಕರ ಬಿಜೆಪಿಗೆ ಸೇರಿಲ್ಲ, ರಾಜ್ಯಕ್ಕೆ ಮತ್ತೆ ಸ್ಥಿರವಾದ ಸರ್ಕಾರವನ್ನು ನೀಡಲು ಬಂದಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ನೀತಿಯಿಂದ ಪ್ರಭಾವಿತರಾಗಿ ಇಂದು 6 ಶಾಸಕರು ನಮ್ಮ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಿದರು.