ನವದೆಹಲಿ: ಸೆಟಪ್ ಬಾಕ್ಸ್'ಗಳಲ್ಲಿ ಚಿಪ್ ಅಳವಡಿಸುವ ಕೇಂದ್ರ ಸರ್ಕಾರದ ಪ್ರಸ್ತಾಪದ ಕುರಿತು ವರದಿಗಳು ಪ್ರಕಟವಾಗುತ್ತಿದ್ದಂತೆಯೇ, ನಾಗರಿಕರ ಗೌಪ್ಯತೆ ನೀತಿಯನ್ನು ಬಿಜೆಪಿ ಉಲ್ಲಂಘಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರ ಜನರ "ಮಲಗುವ ಕೋಣೆ"ಯೊಳಗೆ ಪ್ರವೇಶಿಸುತ್ತಿದೆ ಎಂದು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

"BREAKING! ಬಿಜೆಪಿ ಮುಂದೆ ಯಾವುದರ ಮೇಲೆ ಕಣ್ಗಾವಲಿಡಲಿದೆ ಎಂಬುದು ಇದೀಗ ಬಹಿರಂಗ! ಗೌಪ್ಯತೆಯ ಗಂಭೀರ ಉಲ್ಲಂಘನೆಯಲ್ಲಿ, ಸ್ಮೃತಿ ಇರಾನಿ ಅವರು ನೀವು ನಿಮ್ಮ ಮಲಗುವ ಕೋಣೆಯ ನಾಲ್ಕು ಗೋಡೆಗಳ ನಡುವೆ ಯಾವ ಟಿವಿ ಕಾರ್ಯಕ್ರಮವನ್ನು ವೀಕ್ಷಿಸುತ್ತೀರಿ ಎಂಬುದನ್ನು ನಿಮ್ಮ ಅನುಮತಿಯಿಲ್ಲದೆ ತಿಳಿಯಲು ಬಯಸುತ್ತಿದ್ದಾರೆ! ಏಕೆ?" ಎಂದು ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.



ಇದಕ್ಕೂ ಮುನ್ನ, ನೂತನ ಟಿವಿ ಸೆಟ್ ಅಪ್ ಬಾಕ್ಸ್'ಗಳಲ್ಲಿ ಚಿಪ್ ಅಳವಡಿಸುವ ವಾರ್ತಾ ಮತ್ತು ಪ್ರಚಾರ ಇಲಾಖೆಯ ಪ್ರಸ್ತಾಪದ ಕುರಿತು ವರದಿಗಳು ಪ್ರಕಟವಾಗಿದ್ದವು. ಈ ಸೆಟ್ ಅಪ್ ಬಾಕ್ಸ್'ಗಳಲ್ಲಿ ಅಳವಡಿಸಲಾಗುವ ಚಿಪ್'ಗಳು ನೀವು ಯಾವ ಚಾನೆಲ್ ಅನ್ನು ಎಷ್ಟು ಸಮಯದವರೆಗೆ ವೀಕ್ಷಿಸುತ್ತೀರಿ ಎಂಬ ಅಂಕಿಅಂಶಗಳನ್ನು ಒದಗಿಸುತ್ತವೆ ಎನ್ನಲಾಗಿದೆ. 


"ಇದು ಜಾಹೀರಾತುದಾರರು ಮತ್ತು DAVP(Directorate of Advertising and Visual Publicity) ತಮ್ಮ ಜಾಹೀರಾತು ವೆಚ್ಚವನ್ನು ಬುದ್ಧಿವಂತಿಕೆಯಿಂದ ಉಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದರಿಂದ ಅತಿ ಹೆಚ್ಚು ವೀಕ್ಷಿಸಲಾದ ಚಾನೆಲ್'ಗಳಿಗೆ ಮಾತ್ರ ಬಡ್ತಿ ನೀಡಲಾಗುತ್ತದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.