ಚೆನ್ನೈ: ಬರಪೀಡಿತ ಚೆನ್ನೈನಲ್ಲಿ ವಾಸಿಸುತ್ತಿರುವ ಜನರಿಗೆ ಇಂದು ಕೊಂಚ ಸಮಾಧಾನ ಸಿಗುವ ಸಾಧ್ಯತೆ ಇದೆ. 2.5 ಮಿಲಿಯನ್ ಲೀಟರ್ ನೀರನ್ನು ಹೊತ್ತ ವಿಶೇಷ ರೈಲು ಶುಕ್ರವಾರ ಚೆನ್ನೈಗೆ ಬರಲಿದೆ. ದಕ್ಷಿಣ ರೈಲ್ವೆ ಅಧಿಕಾರಿಯೊಬ್ಬರ ಪ್ರಕಾರ, ತಮಿಳುನಾಡಿನ ವೆಲ್ಲೂರು ಜಿಲ್ಲೆಯಿಂದ ನೀರು ಸಾಗಿಸುವ ವಿಶೇಷ 50 ವ್ಯಾಗನ್ ರೈಲು ಶುಕ್ರವಾರ ಮಧ್ಯಾಹ್ನ ಚೆನ್ನೈ ತಲುಪಲಿದೆ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಚೆನ್ನೈಗೆ ನೀರು ಸಾಗಿಸುವ ಮೊದಲ ರೈಲು ಇಂದು ಬೆಳಿಗ್ಗೆ  ವೆಲ್ಲೂರು ಜಿಲ್ಲೆಯ ಜೊಲಾರ್‌ಪೇಟೆ ರೈಲ್ವೆ ನಿಲ್ದಾಣದಿಂದ ಹೊರಟಿದ್ದು ಮಧ್ಯಾಹ್ನದ ವೇಳೆ ಆ ರೈಲು ರಾಜ್ಯ ರಾಜಧಾನಿ ತಲುಪಲಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.



ಜೋಲಾರ್‌ಪೆಟ್ ನಿಲ್ದಾಣದಿಂದ ಫ್ಲ್ಯಾಗ್ ಮಾಡಲಾದ ವಿಶೇಷ ರೈಲಿನ ಪ್ರತಿಯೊಂದು ವ್ಯಾಗನ್ 50,000 ಲೀಟರ್ ನೀರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷ ರೈಲು ಗುರುವಾರ ಚೆನ್ನೈಗೆ ತಲುಪಬೇಕಿತ್ತು, ಆದರೆ ರೈಲ್ವೆ ನಿಲ್ದಾಣಕ್ಕೆ ಟ್ಯಾಂಕ್ ಅನ್ನು ಸಂಪರ್ಕಿಸುವ ಕವಾಟಗಳಲ್ಲಿನ ಸೋರಿಕೆಯಿಂದಾಗಿ ಈ ಕಾರ್ಯ ಒಂದು ದಿನ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ರೈಲು ಇಲ್ಲಿನ ವಿಲ್ಲಿವಾಕ್ಕಂ ನಿಲ್ದಾಣವನ್ನು ತಲುಪಿದಾಗ ನೀರನ್ನು ಇಳಿಸುವ ಸಂದರ್ಭದಲ್ಲಿ ತಮಿಳುನಾಡು ಸರ್ಕಾರದ ಸಚಿವರು ಹಾಜರಾಗುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಕೆ. ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ರಾಜ್ಯ ಸರ್ಕಾರವು ಈ ಹಿಂದೆ 10 ಮಿಲಿಯನ್ ಲೀಟರ್ ನೀರನ್ನು ಜೋಲಾರ್‌ಪೆಟ್‌ನಿಂದ ರೈಲ್ವೆ ಮೂಲಕ ಸಾಗಿಸುವುದಾಗಿ ಘೋಷಿಸಿತ್ತು. ಇದಕ್ಕಾಗಿ 65 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಸಿಎಂ ಹೇಳಿದ್ದರು.


ಪ್ರಸ್ತುತ, ಚೆನ್ನೈ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಚೆನ್ನೈ ಮೆಟ್ರೋ ವಾಟರ್) ರಾಜ್ಯ ರಾಜಧಾನಿಯಲ್ಲಿ ದಿನಕ್ಕೆ ಸುಮಾರು 525 ಮಿಲಿಯನ್ ಲೀಟರ್ (ಎಂಎಲ್‌ಡಿ) ಪೂರೈಸುತ್ತಿದೆ. ಜೊಲಾರ್‌ಪೇಟ್‌ನ ನೀರು ಈಗಿರುವ ಪೂರೈಕೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಪ್ರತಿ ಟ್ರಿಪ್‌ಗೆ ಸುಮಾರು 8.5 ಲಕ್ಷ ರೂ. ವೆಚ್ಚ ತಗುಲಲಿದೆ.


ಚೆನ್ನೈಗೆ ನೀರು ಪೂರೈಸುವ ಚೋಳವರಂ (ಪೂರ್ಣ ಸಾಮರ್ಥ್ಯ 1,081 ಎಂಸಿಎಫ್ಟಿ) ಮತ್ತು ರೆಡ್‌ಹಿಲ್ಸ್ (ಪೂರ್ಣ ಸಾಮರ್ಥ್ಯ 3,300 ಎಮ್‌ಸಿಎಫ್ಟಿ) ಜಲಾಶಯಗಳು ಮತ್ತು ಚೆಂಬರಂಬಕ್ಕಂ ಸರೋವರ (ಪೂರ್ಣ ಸಾಮರ್ಥ್ಯ 3,645 ಎಮ್‌ಸಿಎಫ್ಟಿ) ಒಣಗಿದ್ದರೆ, 16 ಎಂಸಿ ಅಡಿ ನೀರನ್ನು ಪೂಂಡಿ ಜಲಾಶಯದಿಂದ ಬಿಡಲಾಗಿದೆ ಎಂದು ಚೆನ್ನೈ ಮೆಟ್ರೋ ವಾಟರ್ ಕಾರ್ಪೊರೇಶನ್ ತಿಳಿಸಿದೆ.


ಚೆನ್ನೈನಲ್ಲಿ ನೀರಿಗೆ ಭಾರೀ ಆಹಾಕಾರ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಕಂಪನಿಗಳು ಉದ್ಯೋಗಿಗಳನ್ನು ಮನೆಯಿಂದ ಕೆಲಸಮಾಡುವಂತೆ ತಿಳಿಸಿದ್ದರೆ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.


ಚೆನ್ನೈ ಜೊತೆಗೆ, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವಾರು ನಗರಗಳು ಸಹ ನೀರಿನ ಕೊರತೆಯಿಂದ ಬಳಲುತ್ತಿವೆ.


ಚೆನ್ನೈನ ಹೊರವಲಯದಲ್ಲಿ ವಾಸಿಸುವ ಜನರು  ಟ್ಯಾಂಕರ್ ಲಾರಿಗಳಿಗೆ ಮುತ್ತಿಗೆ ಹಾಕಿ, ರಸ್ತೆ ತಡೆ ನಡೆಸುತ್ತಿದ್ದಾರೆ. ಮಳೆಯ ಕೊರತೆಯಿಂದಾಗಿ ಚೆನ್ನೈ ಮತ್ತು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅಂತರ್ಜಲ ಮಟ್ಟ ಕುಸಿಯುತ್ತಿದೆ.


ಪ್ರಕೃತಿ ನಮಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನೂ ಒದಗಿಸಿದೆ. ಆದರೆ ಪ್ರಕೃತಿಯನ್ನು ನಾವು ರಕ್ಷಿಸದಿದ್ದರೆ, ನೀರನ್ನು ಹಿತ-ಮಿತವಾಗಿ ಬಳಸದಿದ್ದರೆ ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ತಲೆದೂರಿರುವ ನೀರಿನ ಸಮಸ್ಯೆ ಮುಂದೊಂದು ದಿನ ಎಲ್ಲರ ಸಮಸ್ಯೆಯಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ಎಲ್ಲರೂ ಗಿಡ-ಮರಗಳನ್ನು ಉಳಿಸಿ-ಬೆಳೆಸಿ. ನೀರನ್ನು ಸಂರಕ್ಷಿಸಿ.