ನವದೆಹಲಿ: ಶಾಲೆ ಸ್ವಚ್ಛ ಮಾಡುತ್ತಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿಗೆ ಚೇಳು ಕಚ್ಚಿದ ಪರಿಣಾಮ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಝಾನ್ಸಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಶಾಲೆಯ ಮಹಡಿಗಳನ್ನು ಸ್ವಚ್ಛ ಮಾಡಲು ವಿದ್ಯಾರ್ಥಿಗಳಿಗೆ ಆದೇಶಿಸಲಾಗಿತ್ತು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಕೊಂಬೆಗಳನ್ನು ಎತ್ತಿ ಕಸ ಗುಡಿಸುತ್ತಿದ್ದ ಸಂದರ್ಭದಲ್ಲಿ ನಾಲ್ಕನೇ ತರಗತಿ ಬಾಲಕನಿಗೆ ಚೇಳು ಕಚ್ಚಿದ್ದಾಗಿ ಸಹಪಾಠಿಯೊಬ್ಬ ಮಾಹಿತಿ ನೀಡಿದ್ದಾನೆ. 


ಅಷ್ಟೇ ಅಲ್ಲದೆ, ಚೇಳು ಕಚ್ಚಿದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯದ ಸಿಬ್ಬಂದಿ ಮಾಂತ್ರಿಕನ ಬಳಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಬಾಲಕ ಸಂಪೂರ್ಣ ಅಸ್ವಸ್ಥಗೊಂಡ ಬಳಿಕ ಎಚ್ಚೆತ್ತ ಸಿಬ್ಬಂದಿ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. 


ಮತ್ತೊಂದು ವಿಚಿತ್ರ ಸಂಗತಿಯೆಂದರೆ, ಚೇಳು ಕಚ್ಚಿದ ಕೂಡಲೇ ಮಾಂತ್ರಿಕನ ಮನೆಗೆ ಕರೆದೊಯ್ದ ಶಾಲಾ ಸಿಬ್ಬಂದಿ, ಆತ ಮನೆಯಲ್ಲಿ ಇಲ್ಲದ ಕಾರಣ ಫೋನ್ ಮಾಡಿ ಬಾಲಕನ ಕಿವಿಗೆ ಫೋನಿಟ್ಟು,ಮಂತ್ರಗಳನ್ನು ಕೇಳಿಸಿಕೊಳ್ಳುವಂತೆ ಹೇಳಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. 


ಸದ್ಯ ಬಾಲಕನ ಸಾವಿಗೆ ಕಾರಣರಾದ ಶಾಲೆಯ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿ ಪ್ರಕರಣದ ತನಿಖೆಗೆ ಶಿಕ್ಷಣ ಇಲಾಖೆ ಆದೇಶಿಸಿದೆ.