ಬಜೆಟ್ಗೂ ಮೊದಲೇ ಸಾರ್ವಜನಿಕರಿಗೆ ಕೇಂದ್ರದ ಕೊಡುಗೆ; ಎಲ್ಪಿಜಿ ಸಿಲಿಂಡರ್ ದರ ಕಡಿತ
ಸಬ್ಸಿಡಿ ಸಹಿತ ಸಿಲಿಂಡರ್ಗೆ 1.46 ರೂ. ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ದರದಲ್ಲಿ 30 ರೂ. ಕಡಿತವಾಗಿದೆ.
ನವದೆಹಲಿ: ಲೋಕಸಭಾ ಚುನಾವಣೆಗಳ ಮೊದಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಲಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಪ್ರಸ್ತುತ ಅಧಿಕಾರವಧಿಯ ಕೊನೆಯ ಬಜೆಟ್ ಇದಾಗಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ನ್ಯೂಯಾರ್ಕ್ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವುದರಿಂದ ಇತ್ತೀಚೆಗಷ್ಟೇ ಹಣಕಾಸು ಇಲಾಖೆಯ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೇಂದ್ರ ಸರ್ಕಾರದ ಕಡೆಯ ಬಜೆಟ್ ಅನ್ನು ಮಂಡಿಸಲಿದ್ದಾರೆ.
ಬಜೆಟ್ ಮಂಡನೆಗೂ ಒಂದು ದಿನ ಮೊದಲೇ ಕೇಂದ್ರ ಸರ್ಕಾರ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿ ಸಾರ್ವಜನಿಕರಿಗೆ ಸಿಹಿಸುದ್ದಿ ನೀಡಿದೆ. ಗುರುವಾರ ಸಂಜೆ ಕೇಂದ್ರ ಸರ್ಕಾರ ಸಿಲಿಂಡರ್ ದರವನ್ನು ಕಡಿತಗೊಳಿಸಿದ್ದು, 14 ಕೆ.ಜಿ. ತೂಕದ ಸಬ್ಸಿಡಿಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ 1.46 ರೂ. ಕಡಿಮೆಯಾಗಿದೆ. ಸಬ್ಸಿಡಿರಹಿತ ಸಿಲಿಂಡರ್ ಬೆಲೆಯನ್ನು 30 ರೂ. ಕಡಿಮೆ ಮಾಡಿದೆ. ಹೊಸ ಬೆಲೆಯ ಅನ್ವಯ ಸಬ್ಸಿಡಿಸಹಿತ ಸಿಲಿಂಡರ್ ಬೆಲೆ 493.53 ಆಗಲಿದ್ದು, ಸಬ್ಸಿಡಿರಹಿತ ಸಿಲಿಂಡರ್ ಬೆಲೆ 659 ರೂ. ಆಗಲಿದೆ. ಈ ಹೊಸ ದರ ಗುರುವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದೆ.
ಇದಕ್ಕೆ ಮುಂಚಿತವಾಗಿ, ಡಿಸೆಂಬರ್ 1 ರಂದು ಬೆಲೆಯು ಕಡಿತಗೊಂಡಿತು. ಆ ಸಮಯದಲ್ಲಿ, ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ದರವನ್ನು 6.52 ರೂಪಾಯಿ ಕಡಿಮೆ ಮಾಡಲಾಗಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳ ಇಳಿಕೆ ಕಾರಣ ಬೆಲೆಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಎಲ್ಪಿಜಿಯ ಸರಾಸರಿ ಅಂತರರಾಷ್ಟ್ರೀಯ ಬೆಂಚ್ಮಾರ್ಕ್ ದರ ಮತ್ತು ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ವಿದೇಶಿ ವಿನಿಮಯ ದರವನ್ನು ಅವಲಂಬಿಸಿದ್ದು ಆ ಪ್ರಕಾರ ನಿಗದಿಪಡಿಸಲಾಗಿದೆ. ಹೀಗಾಗಿ ಪ್ರತಿ ತಿಂಗಳು ಸಬ್ಸಿಡಿ ಮೊತ್ತವು ಬದಲಾಗುತ್ತದೆ. ಅಂತಹ ಸನ್ನಿವೇಶದಲ್ಲಿ, ಅಂತರರಾಷ್ಟ್ರೀಯ ಬೆಲೆ ಏರಿಕೆಯಾದಾಗ, ಸರಕಾರವು ಹೆಚ್ಚಿನ ಸಬ್ಸಿಡಿಯನ್ನು ನೀಡುತ್ತದೆ ಮತ್ತು ಬೆಲೆ ಕಡಿಮೆಯಾದಾಗ, ಸಬ್ಸಿಡಿ ಕಡಿತಗಳನ್ನು ಮಾಡಲಾಗುತ್ತದೆ.