ಅಪಘಾತದಲ್ಲಿ ಕಾಲು ಕಳೆದುಕೊಂಡ ಬಾಲಕಿಗೆ 53.07 ಲಕ್ಷ ರೂ. ಪರಿಹಾರ: ಸುಪ್ರೀಂಕೋರ್ಟ್ ಆದೇಶ
ಈ ಹಿಂದೆ ಕರ್ನಾಟಕ ಹೈಕೋರ್ಟ್, ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂಲನ್ ನೀಡಿದ್ದ ಪರಿಹಾರ ಮೊತ್ತವನ್ನು 8.9 ಲಕ್ಷ ರೂ.ದಿಂದ ಶೇ.6ರ ಬಡ್ಡಿ ಸೇರಿ 13.65 ಲಕ್ಷ ರೂ.ಗೆ ಹೆಚ್ಚಿಸಿತ್ತು.
ನವದೆಹಲಿ: ಬರೋಬ್ಬರಿ 10 ವರ್ಷಗಳ ಹಿಂದೆ ಬಳ್ಳಾರಿಯ ಕುಡಿತಿನಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ 6 ವರ್ಷದ ಬಾಲಕಿಗೆ 53.07 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
2012ರ ಏಪ್ರಿಲ್ 19ರಂದು ಬಳ್ಳಾರಿಯ ಕುಡಿತಿನಿಯಲ್ಲಿ ನಡೆದ ಅಪಘಾತದಲ್ಲಿ ಬಾಲಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಕೆಯ ಒಂದು ಕಾಲು ತುಂಡಾಗಿತ್ತು. ಅಲ್ಲದೆ ಆಕೆಯ ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ‘ಈ ಅಪಘಾತದಿಂದ ಬಾಲಕಿಯ ಒಂದು ಕಾಲು ತುಂಡಾಗಿದೆ. ಆಕೆಯ ಸೊಂಟದ ಕೆಳಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಆಕೆ ಜೀವನ ಪರ್ಯಂತ ಶಾಶ್ವತ ಅಂಗವೈಕಲ್ಯಕ್ಕೊಳಗಾಗಿದ್ದಾಳೆ. ಭವಿಷ್ಯದಲ್ಲಿ ಗಳಿಕೆ ಮತ್ತು ಮದುವೆಯ ನಿರೀಕ್ಷೆಯನ್ನೂ ಕೈಬಿಟ್ಟಿದ್ದಾಳೆ. ವೈದ್ಯಕೀಯ ವೆಚ್ಚ ಭರಿಸುವ ಜೊತೆಗೆ ನೋವು ಮತ್ತು ಸಂಕಟಕ್ಕೀಡಾಗಿದ್ದಾಳೆ. ಹೀಗಾಗಿ ಅಪಘಾತ ಪರಿಹಾರದ ಮೊತ್ತವನ್ನು 53.07 ಲಕ್ಷ ರೂ.ಗೆ ಹೆಚ್ಚಿಸಬೇಕು’ ಅಂತಾ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: PNB ಗ್ರಾಹಕರೇ ಆಗಸ್ಟ್ 31ರ ಮೊದಲು ಈ ಕೆಲಸವನ್ನು ತಪ್ಪದೇ ಪೂರ್ಣಗೊಳಿಸಿ
ಅಪಘಾತ ಸಂಭವಿಸಿದ 10 ವರ್ಷಗಳ ಬಳಿಕ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಿ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ನ್ಯಾಯಪೀಠವು ಮಹತ್ವದ ಆದೇಶ ನೀಡಿದೆ. ಅರ್ಜಿದಾರಳಾದ ಬಾಲಕಿ ರೂಪಾ ಪರ ವಕೀಲರಾದ ಸಂಜಯ್ ಎಂ.ನುಲಿಯವರು ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.
ಈ ಹಿಂದೆ ಕರ್ನಾಟಕ ಹೈಕೋರ್ಟ್, ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂಲನ್ ನೀಡಿದ್ದ ಪರಿಹಾರ ಮೊತ್ತವನ್ನು 8.9 ಲಕ್ಷ ರೂ.ದಿಂದ ಶೇ.6ರ ಬಡ್ಡಿ ಸೇರಿ 13.65 ಲಕ್ಷ ರೂ.ಗೆ ಹೆಚ್ಚಿಸಿತ್ತು. ಅರ್ಜಿದಾರರ ಪರ ವಕೀಲರು ಅಪಘಾತದಲ್ಲಿ ಕಾಲು ತುಂಡಾಗಿದ್ದರ ಪರಿಣಾಮ ಬಾಲಕಿ ಅನುಭವಿಸುತ್ತಿರುವ ದೈಹಿಕ-ಮಾನಸಿಕ ನೋವು ಹಾಗೂ ಭಾವನಾತ್ಮಕ ಸಂಕಟ ತೋರಿಸುವ ಚಿತ್ರಗಳನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.
ಇದನ್ನೂ ಓದಿ: Used Cars: 2 ಲಕ್ಷ ಬಜೆಟ್‌ನಲ್ಲಿ ಖರೀದಿಸಿ ಈ ಕಾರುಗಳನ್ನು!
‘ಬಾಲಕಿಯು ಬೆಳೆದಂತೆ ಮತ್ತೊಂದು ಕಾಲು ಕೂಡ ಆಕೆಗೆ ಆಧಾರವಾಗುತ್ತಿಲ್ಲ. ಆಕೆ ಕೃತಕ ಅಂಗವನ್ನೂ ಬಳಸಲು ಸಾಧ್ಯವಾಗುತ್ತಿಲ್ಲ. ಆಕೆ ತನ್ನ ನಿತ್ಯದ ದಿನಚರಿಗೆ ಮತ್ತೊಬ್ಬರ ಮೇಲೆ ಅವಲಂಬಿತವಾಗಿರಬೇಕಾಗಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಬೇಕಾದರೆ ಆಕೆ ಸದಾ ಬಾಡಿಗೆ ಸಾರಿಗೆ ಬಳಸಬೇಕಾಗುತ್ತದೆ. ಹೀಗಾಗಿ ಆಕೆ ವಿವಾಹವಾಗುವ ನಿರೀಕ್ಷೆಯನ್ನೂ ಕಳೆದುಕೊಂಡಿದ್ದಾಳೆ’ ಅಂತಾ ಅರ್ಜಿದಾರರ ಪರ ವಕೀಲರು ತಿಳಿಸಿದ್ದರು.
‘ಪರಿಹಾರದ ಮೊತ್ತವನ್ನು ವಾರ್ಷಿಕ ಬಡ್ಡಿ ಶೇ.8ರೊಂದಿಗೆ 53.07ಲಕ್ಷ ರೂ.ಗೆ ಹೆಚ್ಚಿಸಿರುವ ನ್ಯಾಯಪೀಠವು, ಅರ್ಜಿದಾರ ಬಾಲಕಿಯು ಇನ್ನೂ ಅಪ್ರಾಪ್ತ ವಯಸ್ಕಳಾಗಿರುವುದರಿಂದ ಪರಿಹಾರ ಮೊತ್ತದಲ್ಲಿ 10 ಲಕ್ಷ ರೂ.ವನ್ನು ಆಕೆಯ ತಂದೆಗೆ ತಕ್ಷಣವೇ ವಿತರಿಸಬೇಕು ಹಾಗೂ ಉಳಿದ ಮೊತ್ತವನ್ನು ಆಕರ್ಷಕ ಬಡ್ಡಿಯ ಮೊತ್ತಕ್ಕೆ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಬೇಕು’ ಅಂತಾ ಸೂಚಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.