453 ಕೋಟಿ ರೂ. ಪಾವತಿಸಿ, ಇಲ್ಲಾ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ಸುಪ್ರೀಂ ಖಡಕ್ ಆದೇಶ
4 ವಾರಗಳಲ್ಲಿ 453 ಕೋಟಿ ರೂ. ಪಾವತಿಸುವಂತೆ ಅನಿಲ್ ಅಂಬಾನಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನವದೆಹಲಿ: ಸ್ವೀಡನ್ ಮೂಲದ ಎರಿಕ್ಸನ್ ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕಂಪನಿ ಮುಖ್ಯಸ್ಥ ಅನಿಲ್ ಅಂಬಾನಿ ಹಾಗೂ ಇಬ್ಬರು ನಿರ್ದೇಶಕರನ್ನು ತಪ್ಪಿತಸ್ಥರು ಎಂದು ಹೇಳಿರುವ ಸುಪ್ರೀಂ ಕೋರ್ಟ್ ಕೂಡಲೇ 453 ಕೋಟಿ ರೂ.ಗಳನ್ನು ಪಾವತಿಸುವಂತೆ ಆದೇಶ ನೀಡಿದೆ.
ಎರಿಕ್ಸನ್ ಗೆ ರಿಲಯನ್ಸ್ ಗ್ರೂಪ್ ಗೆ ಅನಿಲ್ ಅಂಬಾನಿ 550 ಕೋಟಿ ರು. ಹಣ ನೀಡದಿರುವ ಪ್ರಕರಣದ ವಿಚಾರಣೆಯನ್ನು ಬುಧವಾರ ನಡೆಸಿದ ಸುಪ್ರೀಂ ಕೋರ್ಟ್ 4 ವಾರಗಳಲ್ಲಿ 453 ಕೋಟಿ ರೂ. ಪಾವತಿಸಬೇಕು ಎಂದು ಅನಿಲ್ ಅಂಬಾನಿಗೆ ಸೂಚನೆ ನೀಡಿದೆ. ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ನೀಡಲಾಗುವುದು ಎಂದು ಸುಪ್ರಿಂ ಹೇಳಿದೆ. ಅಲ್ಲದೆ, ಅನಿಲ್ ಅಂಬಾನಿ ಸೇರಿದಂತೆ ಈ ಪ್ರಕರಣದ ತಪ್ಪಿತಸ್ಥರಾದ ರಿಲಯನ್ಸ್ ಟೆಲಿಕಾಂ ಸಂಸ್ಥೆಯ ಮುಖ್ಯಸ್ಥ ಸತೀಶ್ ಸೇತ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಮುಖ್ಯಸ್ಥ ಚಯ್ಯಾ ವಿರಾಣಿ ಅವರಿಗೆ ತಲಾ ಒಂದು ಕೋಟಿ ರೂ. ದಂಡ ವಿಧಿಸಿದ್ದು, ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ಸುಪ್ರೀಂ ಹೇಳಿದೆ.
ಸ್ವೀಡನ್ ಮೂಲದ ಎರಿಕ್ಸನ್ ಕಂಪೆನಿಯಿಂದ ರಿಲಾಯನ್ಸ್ ಕಮ್ಯುನಿಕೇಷನ್ ಈ ಹಿಂದೆ ವಿದ್ಯುನ್ಮಾನ ಉಪಕರಣಗಳನ್ನು ಖರೀದಿ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ, ಬಾಕಿ ನೀಡಬೇಕಾಗಿದ್ದ 453 ಕೋಟಿ ಹಣ ನೀಡದೆ ಸತಾಯಿಸಲಾಗಿತ್ತು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ವಿನುತ್ ಸರಣ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಫೆ.13ರಂದು ಸುದೀರ್ಘ ವಿಚಾರಣೆ ನಡೆಸಿ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.