ಕುಷ್ಟರೋಗಿಗಳ ಕಲ್ಯಾಣಕ್ಕೆ ನೂತನ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಸುಪ್ರೀಂ ಆದೇಶ
ಕುಷ್ಟರೋಗಿಗಳು ಬೇರೆಯಾಗಿ ಇರಬೇಕಾಗಿಲ್ಲ, ಅವರೂ ಸಹ ಉಳಿದವರಂತೆಯೇ ಸಾಮಾನ್ಯ ವೈವಾಹಿಕ ಜೀವನ ನಡೆಸಲು ಅನುಕೂಲವಾಗುವಂತೆ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನವದೆಹಲಿ: ಕುಷ್ಟರೋಗಿಗಳ ಕಲ್ಯಾಣಕ್ಕೆ ನೂತನ ನಿಯಮ ಜಾರಿಗೊಳಿಸಿ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಪೀಠವು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿರುವ ಕುಷ್ಠರೋಗ ನಿರ್ಮೂಲನೆ ಹಾಗೂ ಪುನರ್ವಸತಿ ಕೇಂದ್ರಗಳ ಬಗ್ಗೆ ಮತ್ತು ಉಚಿತ ಚಿಕಿತ್ಸೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಅಷ್ಟೇ ಅಲ್ಲದೆ, ಕುಷ್ಟರೋಗವನ್ನು ತೊಡೆದುಹಾಕಲು ನೂತನ ಯೋಜನೆಗಳನ್ನು ರೂಪಿಸುವಂತೆಯೂ ಸೂಚನೆ ನೀಡಿದೆ.
"ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿನ ವೈದ್ಯಕೀಯ ಸಿಬ್ಬಂದಿ ಕುಷ್ಟರೋಗಿಗಳ ಕುರಿತು ತಾರತಮ್ಯ ಮಾಡುವುದಿಲ್ಲ ಎನ್ನುವುದು ಖಚಿತವಾಗುವಂತೆ ಕ್ರಮ ಜರುಗಿಸಬೇಕು. ಕುಷ್ಟರೋಗಿಗಳು ಬೇರೆಯಾಗಿ ಇರಬೇಕಾಗಿಲ್ಲ, ಅವರೂ ಸಹ ಉಳಿದವರಂತೆಯೇ ಸಾಮಾನ್ಯ ವೈವಾಹಿಕ ಜೀವನ ನಡೆಸಲು ಅನುಕೂಲವಾಗುವಂತೆ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಷ್ಟೇ ಅಲ್ಲದೆ, ಕುಷ್ಟರೋಗ ಪೀಡಿತ ಕುಟುಂಬಗಳಿಂದ ಬಂದ ಮಕ್ಕಳಿಗೆ ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣ ನೀಡುವಂತೆ ನಿಯಮ ರೂಪಿಸಬೇಕು. ಕುಷ್ಟರೋಗದಿಂದ ಬಳಲುತ್ತಿರುವವರಿಗೆ ಬಿಪಿಎಲ್ ಕಾರ್ಡ್ಗಳನ್ನು ವಿತರಿಸುವಂತೆ ಸುಪ್ರೀಂ ಆದೇಶಿಸಿದೆ.
ದೇಶದಿಂದ ಕುಷ್ಠರೋಗವನ್ನು ನಿರ್ಮೂಲನೆ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಲು ಸಮಗ್ರ ಯೋಜನೆಯೊಂದನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕಳೆದ ಜುಲೈ 5ರಂದು ನಿರ್ದೇಶನ ನಿಡಿದ್ದಿತು."ವಾಸಿಮಾಡಬಹುದಾದ" ರೋಗವನ್ನು ಜನರ ಜೀವನದ ಮೇಲೆ ಪರಿಣಾಮ ಬೀರುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಕೋರ್ಟ್ ಹೇಳಿದೆ.