ನಿರ್ಭಯಾ ಕೇಸ್; ಅಪರಾಧಿ ಪವನ್ ಗುಪ್ತಾ ಅರ್ಜಿ ವಜಾಗೊಳಿಸಿದ ಸುಪ್ರೀಂ
ಪವನ್ ಗುಪ್ತಾ ಸುಪ್ರೀಂ ಕೋರ್ಟ್ನಲ್ಲಿ ಕ್ಷಮಾಪಣಾ ಅರ್ಜಿ ಸಲ್ಲಿಸಿದ ಪ್ರಕರಣದ ನಾಲ್ಕನೇ ಅಪರಾಧಿ.
ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ, ಮರಣದಂಡನೆ ಶಿಕ್ಷೆಗೊಳಗಾದ ಪವನ್ ಗುಪ್ತಾ ಅವರ ಕ್ಷಮಾಪಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕೆಂದು ಮನವಿ ಮಾಡಿ ಅಪರಾಧಿ ಪವನ್ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಇಂದು ವಜಾಗೊಳಿಸಿದೆ.
ನಿರ್ಭಯಾ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾಗಿರುವ ಎಲ್ಲಾ ನಾಲ್ವರು ಆರೋಪಿಗಳು ಮರಣದಂಡನೆಯಿಂದ ಬಚಾವ್ ಆಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಗಮನಾರ್ಹವಾಗಿ ನಿರ್ಭಯಾ ಪ್ರಕರಣದ ಎಲ್ಲ ಅಪರಾಧಿಗಳನ್ನು ನಾಳೆ(ಮಾರ್ಚ್ 3) ಗಲ್ಲಿಗೇರಿಸಲಾಗುವುದು. ಪವನ್ ಗುಪ್ತಾ ಅವರಿಗೆ ರಾಷ್ಟ್ರಪತಿಗಳೊಂದಿಗೆ ಕರುಣೆ ಅರ್ಜಿಯ ಆಯ್ಕೆ ಇನ್ನೂ ಇದೆ. ಕೆಳ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ ವರೆಗೆ ಮುಕೇಶ್, ಅಕ್ಷಯ್, ವಿನಯ್ ಮತ್ತು ಪವನ್ ಎಂಬ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ಮರಣದಂಡನೆಗೆ ಒಳಪಡಿಸುವ ಒಂದು ದಿನ ಮೊದಲು ಪವನ್ ಅವರ ಮನವಿಯನ್ನು ಉನ್ನತ ನ್ಯಾಯಾಲಯ ವಜಾಗೊಳಿಸಿದೆ. ಅದಾಗ್ಯೂ, ಪವನ್ ಗುಪ್ತಾ ಇನ್ನೂ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿಲ್ಲ.
ಪವನ್ ಅವರಲ್ಲದೆ, ಇತರ ಮೂವರು ಆರೋಪಿಗಳಾದ ಮುಖೇಶ್, ಅಕ್ಷಯ್ ಮತ್ತು ವಿನಯ್ ಅವರ ಕ್ಷಮಾಪಣಾ ಅರ್ಜಿಗಳನ್ನು ಈಗಾಗಲೇ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರ ನಂತರ ರಾಷ್ಟ್ರಪತಿಗಳು ಸಹ ಇವರ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ವಿಶೇಷವೆಂದರೆ, ಪಟಿಯಾಲ ಹೌಸ್ ನ್ಯಾಯಾಲಯ ನಾಲ್ಕು ಅಪರಾಧಿಗಳಿಗೆ ಮೂರು ಬಾರಿ ಡೆತ್ ವಾರಂಟ್ ಹೊರಡಿಸಿದೆ. ಆದರೆ ಕಾನೂನು ಕಾರಣಗಳಿಂದಾಗಿ ಗಲ್ಲಿಗೇರಿಸುವಿಕೆಯನ್ನು 2 ಬಾರಿ ಮುಂದೂಡಲಾಗಿದೆ. ಈಗ ಮಾರ್ಚ್ 3 ರಂದು ಗಲ್ಲಿಗೇರಿಸಲಾಗುವುದು. ಕಾನೂನು ನಿಬಂಧನೆಗಳ ಪ್ರಕಾರ, ಎಲ್ಲಾ ಕಾನೂನು ಪರಿಹಾರಗಳು ಮುಗಿಯುವವರೆಗೂ ಅಪರಾಧಿಯನ್ನು ಗಲ್ಲಿಗೇರಿಸಲಾಗುವುದಿಲ್ಲ. ತಪ್ಪಿತಸ್ಥರ ಮನವಿಯನ್ನು ನ್ಯಾಯಾಲಯದಿಂದ ತಿರಸ್ಕರಿಸಲಾಗಿದ್ದರೂ, ಇತರ ಕಾನೂನು ಆಯ್ಕೆಗಳಿಗಾಗಿ ಇನ್ನೂ 14 ದಿನಗಳನ್ನು ಪಡೆಯುತ್ತದೆ. ನಿರ್ಭಯಾ ಅಪರಾಧಿಗಳಿಗೆ ಪಟಿಯಾಲ ಹೌಸ್ ಕೋರ್ಟ್ ನೀಡಿರುವ ಡೆತ್ ವಾರಂಟ್ ಪ್ರಕಾರ ಮಾರ್ಚ್ 3 ರಂದು ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸಲಾಗುವುದು.