ಇಂದಿನಿಂದ ಅಯೋಧ್ಯೆಯಲ್ಲಿ ಹೊಸ ಅಧ್ಯಾಯ
ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನವೆಂಬರ್ 9 ರಂದು ಬೆಳಿಗ್ಗೆ 10: 30 ಕ್ಕೆ ತೀರ್ಪು ನೀಡಲಿದೆ.
ನವದೆಹಲಿ: ಶತಮಾನಗಳಿಂದಲೂ ವಿವಾದದ ಸ್ವರೂಪದಲ್ಲಿದ್ದ ಅಯೋಧ್ಯೆಯ ಭೂ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯದ ಸಂವಿಧಾನಿಕ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ.
1528ರಿಂದ ಉದ್ಭವಿಸಿದ್ದ ಭೂ ವಿವಾದವು ಹಲವು ಆಯಾಮಗಳನ್ನು ಕಂಡಿದೆ. ರಾಜಕೀಯ ಸ್ಧಿತ್ಯಂತರಗಳನ್ನು ಸೃಷ್ಟಿಮಾಡಿದೆ. ಕೋಮು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ಹೀಗೆ ಸಾಗಿಬಂದ ವಿವಾದ ಅಹಮದಾಬಾದ್ ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾದಿಯಾಗಿ ಸಂವಿಧಾನಿಕ ಪೀಠದವರೆಗೆ ಸಾಗಿ ಬಂದು ಸುದೀರ್ಘವಾಗಿ ವಿಚಾರಣೆ ನಡೆದು 2019ರ ಅಕ್ಟೋಬರ್ 16ರಂದು ತೀರ್ಪನ್ನು ಕಾಯ್ದಿರಿಸಿಲಾಗಿತ್ತು. ಅಂತಿಮ ಘಟ್ಟದಲ್ಲಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ಡೆ, ಡಾ. ಡಿ.ವೈ. ಚಂದ್ರಚೂಡ್, ಎಸ್. ಅಬ್ದುಲ್ ನಜೀರ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಸಂವಿಧಾನ ಪೀಠವು ಇಂದು ತೀರ್ಪನ್ನು ಪ್ರಕಟಿಸಲಿದೆ.
ತೀರ್ಪು ಪ್ರಕಟಿಸುವ ವಿಷಯವನ್ನು ಸುಪ್ರೀಂ ಕೋರ್ಟ್ನ ಮೂಲಗಳು ಖಚಿತಪಡಿಸುತ್ತಿದ್ದಂತೆ ದೇಶದಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರದ ಗೃಹ ಇಲಾಖೆ ಎಲ್ಲಾ ರಾಜ್ಯಗಳ ಗೃಹ ಇಲಾಖೆಗೂ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುವಂತೆ, ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಅಯೋಧ್ಯೆ ನಗರ ಇರುವ ಉತ್ತರ ಪ್ರದೇಶದಲ್ಲಂತೂ 4 ಸಾವಿರಕ್ಕೂ ಹೆಚ್ಚು ಅರೆಮಿಲಿಟರಿ ಪಡೆ ಯೋಧರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. 20 ತಾತ್ಕಾಲಿಕ ಜೈಲುಗಳನ್ನು ನಿರ್ಮಿಸಲಾಗಿದೆ. ಅಯೋಧ್ಯೆ ನಗರ ಪ್ರವೇಶ ನಿರ್ಬಂಧಿಸಲಾಗಿದೆ. ಅಗತ್ಯಬಿದ್ದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಅಯೋಧ್ಯೆಗೆ ರವಾನಿಸಲು ಅನುವಾಗುವಂತೆ ಕೇಂದ್ರ ಸರ್ಕಾರ 2 ಹೆಲಿಕಾಪ್ಟರ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ತೀರ್ಪು ಪ್ರಕಟಣೆ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 12ಗಂಟೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ರಾತ್ರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಕೂಡ ಸರ್ಕಾರದ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ತಾಖೀತು ಮಾಡಿದರು. ಇದಲ್ಲದೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅಯೋಧ್ಯೆ ವಿಷಯವೇ ಪ್ರಾಮುಖ್ಯತೆ ಪಡೆದುಕೊಂಡಿದೆ.