ಶಾಲೆಗೆ ತಡವಾಗಿ ಬಂದ ವಿದ್ಯಾರ್ಥಿಗಳನ್ನು ಬೆತ್ತಲೆ ನಿಲ್ಲಿಸಿದ ಶಿಕ್ಷಕಿ
ಚಿತ್ತೂರು ಜಿಲ್ಲಾಧಿಕಾರಿ ಪಿ.ಎಸ್. ಪ್ರದ್ಯುಮ್ನ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತಿರುಪತಿ: ಶಾಲೆಗೇ ತಡವಾಗಿ ಬಂದಿದ್ದಲ್ಲದೆ ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ನಾಲ್ಕು ವಿದ್ಯಾರ್ಥಿಗಳನ್ನು ಸಂಪೂರ್ಣ ಬೆತ್ತಲೆ ಮಾಡಿ ತರಗತಿ ರೂಂ ಹೊರಗಡೆ ನಿಲ್ಲಿಸಿ ಶಿಕ್ಷೆ ನೀಡಿದ ಅಮಾನುಷ ಘಟನೆ ಆಂಧ್ರ ಪ್ರದೇಶದ ತಿರುಪತಿಯ ಪಂಗಾನೂರ್ ಖಾಸಗಿ ಶಾಲೆಯೊಂದರಲ್ಲಿ ಇತ್ತೀಚೆಗೆ ನಡೆದಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರ ತವರಾದ ಚಿತ್ತೂರಿನ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದ್ದು, 9 ರಿಂದ 10 ವರ್ಷ ನಡುವಿನ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿರುವುದು ವೀಡಿಯೋದಿಂದ ಸಾಬೀತಾಗಿದ್ದು, ಈ ವೀಡಿಯೋ ವೈರಲ್ ಆಗಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಚಿತ್ತೂರು ಜಿಲ್ಲಾಧಿಕಾರಿ ಪಿ.ಎಸ್. ಪ್ರದ್ಯುಮ್ನ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.