ಕೋಲ್ಕತ್ತಾ: ಹೈಡ್ರಾಲಿಕ್‌ ಒತ್ತಡದಿಂದಾಗಿ ಸ್ಪೈಸ್‌ ಜೆಟ್‌ ವಿಮಾನದೊಳಗೆ ಸೆಳೆಯಲ್ಪಟ್ಟ ವಿಮಾನ ನಿರ್ವಹಣಾ ತಂತ್ರಜ್ಞ ಸಾವನ್ನಪ್ಪಿರುವ ದಾರುಣ ಘಟನೆ ಕೊಲ್ಕತ್ತಾದ ಡಂ ಡಂ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. 


COMMERCIAL BREAK
SCROLL TO CONTINUE READING

ಡಂ ಡಂ ವಿಮಾನ ನಿಲ್ದಾಣದಲ್ಲಿ ರೋಹಿತ್ ಪಾಂಡೆ ಸ್ಪೈಸ್ ಜೆಟ್ ಎಟಿಆರ್ ವಿಮಾನದಲ್ಲಿ ವಾಡಿಕೆಯಂತೆ ತಪಾಸಣೆ ನಡೆಸುತ್ತಿದ್ದಾಗ ಈ ದುರಂತ ಘಟನೆ ನಡೆದಿದೆ. ವಿಮಾನದ ಅಂಡರ್ಬೆಲ್ಲಿಯಲ್ಲಿರುವ ಹೈಡ್ರಾಲಿಕ್ ಫ್ಲಾಪ್ ಯಾವುದೇ ಮುನ್ಸೂಚನೆ ಇಲ್ಲದೆ ತನ್ನಿಂತಾನೇ ಮುಚ್ಚಲ್ಪಟ್ಟಿದೆ, ಈ ಸಂದರ್ಭದಲ್ಲಿ ಅವನ ಕುತ್ತಿಗೆ ಅದರೊಳಗೆ ಸಿಲುಕಿಕೊಂಡಿದೆ ಎಂದು ವರದಿಯಾಗಿದೆ. ಪ್ರಾಥಮಿಕ ತನಿಖೆಯಿಂದ ಆತ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ತಿಳಿದುಬಂದಿದೆ.


ತಕ್ಷಣವೇ ತುರ್ತು ನಿರ್ವಹಣಾ ಸಿಬ್ಬಂದಿಗಳು ತಂತ್ರಜ್ಞ ಪಾಂಡೆಯವರ ದೇಹವನ್ನು ಹೊರತೆಗೆಯಲು ಹರಸಾಹಸ ಪಟ್ಟರಾದರೂ, ಹೈಡ್ರಾಲಿಕ್ ಬಾಗಿಲನ್ನು ಮುರಿದು ದೇಹ ಹೊರತೆಗೆಯುವಷ್ಟರಲ್ಲಿ ಪಾಂಡೆ ಉಸಿರುಗಟ್ಟಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. 


ಹೈಡ್ರಾಲಿಕ್ ಒತ್ತಡ ಸಕ್ರಿಯವಾದದ್ದು ಹೇಗೆ, ವಿಮಾನದೊಳಗೆ ಸೆಳೆಯಲ್ಪಟ್ಟ ತಂತ್ರಜ್ಞನ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.