ನವದೆಹಲಿ: ಕೇಂದ್ರ ಸರ್ಕಾರ ಇನ್ನೂ ಚಳಿಗಾಲದ ಅಧಿವೇಶನವನ್ನು ಪ್ರಾರಂಭಿಸಿಲ್ಲ ಎಂಬ ಕಾಂಗ್ರೇಸ್ ಟೀಕೆಗೆ, ರಾಹುಲ್ ಗಾಂಧಿ ಎಷ್ಟು ಕಲಾಪಗಳಿಗೆ ಹಾಜರಾಗಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ತಿರುಗೇಟು ನೀಡಿದೆ.


COMMERCIAL BREAK
SCROLL TO CONTINUE READING

ಸಂಸತ್ತಿನ ಕಾರ್ಯ ಕಲಾಪದ ಬಗ್ಗೆ ಕಾಂಗ್ರೇಸ್ ಗೆ ಇರುವ ಆಸಕ್ತಿ ಕಂಡು ನನಗೆ ಆಶ್ಚರ್ಯವಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಷ್ಟು ಕಲಾಪಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ನಾನು ತಿಳಿಯಲು ಇಚ್ಚಿಸುತ್ತೇನೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.


ಸಂಸತ್ ನಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುವಾಗ, ನೋಟು ಅಮಾನೀಕರಣದ ಬಗ್ಗೆ ಚರ್ಚೆ ನಡೆಸುವಾಗ ನಾವು ಸತ್ಯವನ್ನು ನುಡಿಯುವಾಗ ಸಂಸತ್ ನಿಂದ ಹೊರ ನಡೆಯುವ ಕಾಂಗ್ರೇಸ್ ನಾಯಕರು. ಇಂದು ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು. 


ಇದೇ ವಿಷಯಕ್ಕೆ ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ನಲ್ಲಿ ಕರೆಸಿಕೊಳ್ಳುವುದು ಮತ್ತು ಅದರ ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು  ಹೇಳಿದ್ದಾರೆ.


ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ವಿರೋಧ ಪಕ್ಷವು "ಆಯ್ದ ವಿಸ್ಮೃತಿ" ಯಿಂದ ಬಳಲುತ್ತಿದೆ ಎಂದು ಕುಹಕವಾಡಿದ ಅನಂತ್ ಕುಮಾರ್ 2008 ರ ಮತ್ತು 2013 ರ ಯುಪಿಎ ಅವಧಿಯಲ್ಲೂ ಡಿಸೆಂಬರ್ನಲ್ಲಿ ಚಳಿಗಾಲದ ಅಧಿವೇಶನ ನಡೆಡಿತ್ತು ಎಂದು ಉಲ್ಲೇಖಿಸಿದ್ದಾರೆ.


"ಸಾಮಾನ್ಯವಾಗಿ, ಅಸೆಂಬ್ಲಿ ಚುನಾವಣೆಗಳೊಂದಿಗೆ ಪಾರ್ಲಿಮೆಂಟ್ ಅಧಿವೇಶನವನ್ನು ಅತಿಕ್ರಮಿಸದಂತೆ ಎಚ್ಚರಿಕೆಯಿಂದ ತೆಗೆದುಕೊಳ್ಳಲಾಗಿದೆ. ಇದನ್ನು ಹಿಂದೆಯೂ ಸಹ ಮಾಡಲಾಗಿತ್ತು" ಎಂದು ಅವರು ಹೇಳಿದರು.


ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿನ ಹತಾಶೆಯಿಂದಾಗಿ ಕಾಂಗ್ರೆಸ್ ಪಕ್ಷವು  ಈ ರೀತಿ ಆರೋಪಿಸುತ್ತಿದೆ ಎಂದು ಅನಂತ್ ಕುಮಾರ್ ತಿಳಿಸಿದರು.


ಚಳಿಗಾಲದ ಅಧಿವೇಶನವನ್ನು ಸಾಂಪ್ರದಾಯಿಕವಾಗಿ ನವೆಂಬರ್ ಮೂರನೇ ವಾರದಲ್ಲಿ ಕರೆಯಲಾಗುವುದು ಮತ್ತು ಡಿಸೆಂಬರ್ ಮೂರನೇ ವಾರ ತನಕ ಇರುತ್ತದೆ.