ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದಲ್ಲಿ ಪ್ರತಿಪಕ್ಷಗಳು ನಡೆಸಿದ ಭಾರೀ ಪ್ರತಿಭಟನೆ ಮಧ್ಯೆ ಲೋಕಸಭೆ 2019 ರ ಮಾಹಿತಿ ಹಕ್ಕು (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ. 



COMMERCIAL BREAK
SCROLL TO CONTINUE READING

ಈ ಮಸೂದೆ ಪ್ರಮುಖವಾಗಿ 2005 ರ ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರಲಿದೆ. ಅದರಲ್ಲಿ  ಮಾಹಿತಿ ಆಯುಕ್ತರ ವೇತನ, ಭತ್ಯೆ ಮತ್ತು ಸೇವಾ ಪರಿಸ್ಥಿತಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ನಿಗದಿಪಡಿಸಲು ಕೇಂದ್ರಕ್ಕೆ ನಿರ್ಣಾಯಕ ಅಧಿಕಾರವನ್ನು ನೀಡಲು ಈ ಮಸೂದೆ ಪ್ರಸ್ತಾಪಿಸಿದೆ.ಮುಖ್ಯ ಮಾಹಿತಿ ಆಯುಕ್ತರು, ಮಾಹಿತಿ ಆಯುಕ್ತರು ಮತ್ತು ರಾಜ್ಯ ಮಾಹಿತಿ ಆಯುಕ್ತರ ಕಚೇರಿಯ ಅವಧಿಯನ್ನು ಬದಲಾಯಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡಲು ಅದು ಪ್ರಸ್ತಾಪಿಸಿದೆ. ಇದರರ್ಥ ಎಲ್ಲಾ ಮಾಹಿತಿ ಆಯುಕ್ತರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರ ರೂಪಿಸಿದ ನಿಯಮಗಳ ಪ್ರಕಾರ ನಿಗದಿಪಡಿಸಬಹುದು.



ಪ್ರಸ್ತುತ ಆರ್‌ಟಿಐ ಕಾಯ್ದೆಯ ಪ್ರಕಾರ, ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ವೇತನ ಮತ್ತು ಭತ್ಯೆಗಳು ಕ್ರಮವಾಗಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರಿಗೆ ಸಮನಾಗಿರುತ್ತವೆ, ಇವುಗಳನ್ನು ಸಂವಿಧಾನದ ಪ್ರಕಾರ ನಿರ್ಧರಿಸಲಾಗುತ್ತದೆ.


ಮಾಹಿತಿ ಆಯೋಗವನ್ನು ಚುನಾವಣಾ ಆಯೋಗ ದಂತಹ ಸಾಂವಿಧಾನಿಕ ಸಂಸ್ಥೆಗೆ ಸಮೀಕರಿಸುವುದು ಅಸಂಗತ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಪ್ರಸ್ತಾವಿತ ಮಸೂದೆಯು ತಿದ್ದುಪಡಿಯ ಕಾರಣವನ್ನು ತಿಳಿಸಿದ್ದು ಅದರಲ್ಲಿ ಪ್ರಮುಖವಾಗಿ  ಭಾರತದ ಚುನಾವಣಾ ಆಯೋಗದ ಆದೇಶ ಮತ್ತು ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗವು ವಿಭಿನ್ನವಾಗಿವೆ. ಆದ್ದರಿಂದ, ಅವರ ಸ್ಥಿತಿ ಮತ್ತು ಸೇವಾ ಪರಿಸ್ಥಿತಿಗಳನ್ನು ತಕ್ಕಂತೆ ತರ್ಕಬದ್ಧಗೊಳಿಸಬೇಕಾಗಿದೆ ಎಂದು ಹೇಳುತ್ತದೆ.


ಮಸೂದೆಯ ಕುರಿತ ಚರ್ಚೆಯ ಸಂದರ್ಭದಲ್ಲಿ, ಪ್ರಸ್ತಾವಿತ ಬದಲಾವಣೆಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಸ್ವತಂತ್ರ ಮಾಹಿತಿ ಆಯುಕ್ತರನ್ನು ನೇಮಕ ಮಾಡುವ ಮತ್ತು ವಜಾ ಮಾಡುವ ಅಧಿಕಾರವನ್ನು ಪಡೆಯುತ್ತದೆ ಎಂದು ತರೂರ್ ವಿರೋಧ ವ್ಯಕ್ತಪಡಿಸಿದರು. "ಯಾವುದೇ ಸಾರ್ವಜನಿಕ ಸಮಾಲೋಚನೆ ಇಲ್ಲದೆ ಮಸೂದೆಯನ್ನು ಏಕೆ ಮಂಡಿಸಲಾಗಿದೆ ಎಂದು ಪ್ರಶ್ನಿಸಿದ ತರೂರ್, ಮಸೂದೆಯನ್ನು ಪರಿಚಯಿಸುವಲ್ಲಿ ಸರ್ಕಾರವು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿದೆ ಎಂದು ಆರೋಪಿಸಿದರು.


ಇನ್ನು ಮುಂದುವರೆದು ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿದ 'ಶಶಿ ತರೂರ್ 'ಸರ್ಕಾರವು ಮಸೂದೆಯನ್ನು ಮಂಡಿಸಲು ಏಕೆ ಹಪಾಹಪಿಸುತ್ತಿದೆ ? ಕೇಂದ್ರ ಮಾಹಿತಿ ಆಯೋಗವು ಪ್ರಧಾನಮಂತ್ರಿಯ ಶೈಕ್ಷಣಿಕ ವಿವರಗಳ ಬಗ್ಗೆ ಆದೇಶವನ್ನು ನೀಡಿದ್ದರಿಂದಲೇ? "ಎಂದು ಪ್ರಶ್ನಿಸಿದರು. ಕಾನೂನು ಮತ್ತು ಪಾರದರ್ಶಕತೆಯನ್ನು ಹಾಳುಮಾಡಲು ಮಸೂದೆಯನ್ನು ತರಲಾಗಿದೆ ಮತ್ತು ಅದು ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು .


ಇನ್ನೊಂದೆಡೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅರುಣಾ ರಾಯ್ ಮತ್ತು ನಿಖಿಲ್ ದೇ ಕೂಡ ಸರ್ಕಾರದ ಪ್ರಸ್ತಾವಿತ ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.