ನವದೆಹಲಿ: ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಬುಧವಾರ ರಾಜ್ಯಸಭೆಯಲ್ಲೂ ಅಂಗೀಕಾರವಾಯಿತು. ರಾಜ್ಯಸಭೆಯು ಸುಮಾರು 10 ಗಂಟೆಗಳ ಕಾಲ ನಡೆದ ನಂತರ, ಸಂವಿಧಾನ (124 ನೇ ತಿದ್ದುಪಡಿ), 2019 ಬಿಲ್ ಅಂಗೀಕರಿಸಿತು. ವಿಧೇಯಕದ ಪರವಾಗಿ 165 ಹಾಗೂ ವಿಧೇಯಕ ವಿರುದ್ಧವಾಗಿ ಕೇವಲ 7 ಮತ ಬಿದ್ದಿವೆ. ಮಂಗಳವಾರ ಲೋಕಸಭೆಯಲ್ಲಿ ಈ ಮಸೂದೆಯ ಪರ 323 ಮತಗಳು ಬಿದ್ದರೆ, ಕೇವಲ 3 ಮತಗಳು ಮಸೂದೆಯ ವಿರುದ್ಧ ಚಲಾವಣೆಗೊಂಡಿತ್ತು.


COMMERCIAL BREAK
SCROLL TO CONTINUE READING

ಬಹುತೇಕ ಪಕ್ಷಗಳು ಇದು ಲೋಕಸಭೆ ಚುನಾವಣೆಗಾಗಿ ಮಂಡಿಸಿದ್ದು ಎಂದು ಆಕ್ಷೇಪ ವ್ಯಕ್ತ ಪಡಿಸಿ ದವು. ಅಲ್ಲದೆ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಮಾಡದೆ, ಆಗಿರುವ ವೈಫ‌ಲ್ಯವನ್ನು ಮುಚ್ಚಿಕೊಳ್ಳಲು ಈ ಮಸೂದೆ ಮಂಡಿಸಲಾಗಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಬಹುತೇಕ ಪಕ್ಷಗಳು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದವು.


ಆರ್ಥಿಕ ಮೀಸಲಾತಿ ಮಸೂದೆಯನ್ನು ಬೆಂಬಲಿಸುವ ವೇಳೆ ಮಾತನಾಡಿದ ಎಸ್​ಪಿ ಮುಖಂಡ ರಾಮಗೋಪಾಲ್ ಯಾದವ್ ಸರ್ಕಾರ ಈ ಮೊದಲೇ ಏಕೆ ಈ ಮಸೂದೆಯನ್ನು ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು. ಇದೇ ಸಮಯದಲ್ಲಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರ ಈ ಮಸೂದೆಯನ್ನು ತಂದಿದೆ ಎಂದು ಅವರು ಹೇಳಿದರು. 98% ನಷ್ಟಿರುವ ಬಡ ವರ್ಗಕ್ಕೆ ಕೇವಲ 10% ಮೀಸಲಾತಿ, 2% ರಷ್ಟಿರುವ ಶ್ರೀಮಂತ ವರ್ಗಕ್ಕೆ 40% ಮೀಸಲಾತಿ ನೀಡಲಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಹೇಳಿದರು.


ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಈ ವಿಧೇಯಕ ಅಂಗೀಕಾರಗೊಂಡಿದ್ದು, ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರ ಕಾನೂನು ನೀತಿಯಾಗಿ ರೂಪುಗೊಳ್ಳಲಿದೆ. ಈ ಮೂಲಕ ಮೇಲ್ವರ್ಗದ ಬಡವರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ದೊರೆಯಲಿದೆ.