ನಮ್ಮ ಸೈನ್ಯವನ್ನು ಪ್ರಶ್ನಿಸುವವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ: India Ka DNA ಕಾರ್ಯಕ್ರಮದಲ್ಲಿ ಜನರಲ್ ವಿ.ಕೆ.ಸಿಂಗ್
ನಮ್ಮ ರಕ್ಷಣಾ ಪಡೆಗಳನ್ನು ಸಾಮಾನ್ಯ ರಾಜಕೀಯ ಭಾಷಣಗಳಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ, ಹೀಗಾಗಿಯೇ ಕೆಲ ರಾಜಕಾರಣಿಗಳು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಜನರಲ್ ವಿ.ಕೆ.ಸಿಂಗ್ ಹೇಳಿದ್ದಾರೆ.
ನವದೆಹಲಿ: ದೇಶದ ಸಶಸ್ತ್ರ ಪಡೆಗಳನ್ನು ಪ್ರಶ್ನಿಸುವುದು, ಅನುಮಾನಿಸುವುದು ಕ್ಷಮಾರ್ಹವಲ್ಲ. ಇಂತಹ ಕಾರ್ಯದಲ್ಲಿ ತೊಡಗಿರುವ ರಾಜಕಾರಣಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜನರಲ್ ವಿ.ಕೆ.ಸಿಂಗ್ ಹೇಳಿದ್ದಾರೆ.
ಜೀ ನ್ಯೂಸ್ ನ 'ಇಂಡಿಯಾ ಕಾ ಡಿಎನ್ಎ ಕಾನ್ಕ್ಲೇವ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ದಾಳಿಗಳ ವಿರುದ್ಧ ಸರ್ಕಾರ ಕಠಿಣ ನಿಲುವನ್ನು ಹೊಂದಿದ್ದು, ಸಶಸ್ತ್ರ ಪಡೆಗಳ ಕ್ರಮವನ್ನು ಪ್ರಶ್ನಿಸಬಾರದು. "ನಮ್ಮ ಸಶಸ್ತ್ರ ಪಡೆಗಳನ್ನು ಯಾರಾದರೂ ಪ್ರಶ್ನಿಸಿದಾಗ ನನಗೆ ಕೋಪ ಬರುತ್ತದೆ. ಅಷ್ಟಕ್ಕೂ ಭಯೋತ್ಪಾದಕ ದಾಳಿಗಳ ವಿರುದ್ಧ ಭಾರತ ಎಂದಿಗೂ ಮೌನ ವಹಿಸುವುದಿಲ್ಲ ಎಂಬ ನಿರ್ಧಾರಕ್ಕೆ ಭಾರತ ಬಂದಿದೆ. 1971ರಿಂದೀಚೆಗೆ ಇದೇ ಮೊದಲ ಬಾರಿಗೆ ನಮ್ಮ ವಾಯುಪಡೆ ಗಡಿಯನ್ನು ದಾಟಿದೆ. ನಮ್ಮ ರಕ್ಷಣಾ ಪಡೆಗಳನ್ನು ಸಾಮಾನ್ಯ ರಾಜಕೀಯ ಭಾಷಣಗಳಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ, ಹೀಗಾಗಿಯೇ ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ" ಎಂದು ಅವರು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗಾಜಿಯಾಬಾದ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಿ.ಕೆ.ಸಿಂಗ್, ದೇಶದ ಜನತೆ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. "ನಾನು ಕೇವಲ ಸ್ಪರ್ಧೆಗಾಗಿ ಚುನಾವಣೆ ಕಣಕ್ಕಿಳಿದಿಲ್ಲ. ಜನರ ಸೇವೆ ಮಾಡಲು ಹಾಗೂ ಅವರ ವಿಶ್ವಾಸ ಗಳಿಸಲು ಸ್ಪರ್ಧಿಸಿದ್ದೇನೆ. ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿರುವ ಕೆಲಸ ನೋಡಿ ಮತ ಹಾಕುವಂತೆ ಜನರಲ್ಲಿ ಮತ ಯಾಚಿಸುತ್ತಿದ್ದೇವೆ" ಎಂದು ಹೇಳಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ರಾಜ್ ಬಬ್ಬರ್ ವಿರುದ್ಧ ಸ್ಪರ್ಧಿಸಿ ಜಯಗಳಿಸಿದ್ದರು.