ಮಹಾರಾಷ್ಟ್ರ: ಬಟ್ಟೆ ಒಗೆಯಲು ನದಿಗೆ ತೆರಳಿದ್ದ ಮಹಿಳೆ ಸೇರಿದಂತೆ ಮೂವರು ನೀರುಪಾಲು
ಮಹಿಳೆಯೊಬ್ಬರು ಬಟ್ಟೆ ಒಗೆಯಲೆಂದು ನದಿಗೆ ತೆರಳಿದ್ದಾಗ ಆಕೆಯ ಮಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ.
ನಾಸಿಕ್: ಬಟ್ಟೆ ಒಗೆಯಲು ನದಿಗೆ ತೆರಳಿದ್ದ ಮಹಿಳೆ ಸೇರಿದಂತೆ ಮೂವರು ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಮಹಿಳೆಯೊಬ್ಬರು ಬಟ್ಟೆ ಒಗೆಯಲೆಂದು ನದಿಗೆ ತೆರಳಿದ್ದಾಗ ಆಕೆಯ ಮಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಆ ವೇಳೆ ಮಗನನ್ನು ರಕ್ಷಿಸಲು ಮಹಿಳೆ ನೀರಿಗೆ ಹಾರಿದ್ದಾರೆ. ಇಬ್ಬರೂ ಮೇಲೆ ಬರಲಾಗದಿದ್ದನ್ನು ಕಂಡು ಅವರನ್ನು ರಕ್ಷಿಸಲೆಂದು ಮಹಿಳೆಯೊಂದಿಗೆ ತೆರಳಿದ್ದ ಹುಡುಗಿ ಕೂಡ ನದಿಗೆ ಧುಮುಕಿದ್ದಾಳೆ. ಈಜು ಬರದ ಕಾರಣ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವನಿ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ತಾದ್ವಿ ಸೋಮವಾರ ತಿಳಿಸಿದ್ದಾರೆ.
ಸ್ಥಳೀಯ ನಾಗರೀಕರು ಈ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದೆವು. ಮೃತ ದೇಹಗಳನ್ನು ಸದ್ಯ ನದಿಯಿಂದ ಹೊರಗೆ ತೆಗೆಯಲಾಗಿದೆ ಎಂದು ಅವರು ಹೇಳಿದರು. ಮೃತರನ್ನು ಅನಿತಾ ವಾಗ್ಮೇರ್ (29), ಅವರ ಮಗ ಓಂಕಾರ್ ವಾಘ್ಮಾರೆ (ಐದು) ಮತ್ತು ಪ್ರಜಾಕ್ತ ಗಂಗೋಡೆ (15) ಎಂದು ಗುರುತಿಸಲಾಗಿದೆ. ಪ್ರಕರಣವನ್ನು ನೋಂದಾಯಿಸಲಾಗಿದೆ ಮತ್ತು ಮರಣೋತ್ತರ ಪರೀಕ್ಷೆ ನಂತರ, ದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆಯೆಂದು ಅಧಿಕಾರಿ ಹೇಳಿದರು.