ಮೋದಿ ಸರ್ಕಾರದ 100 ದಿನಗಳ ಆಡಳಿತವೆಂದರೆ `ದಬ್ಬಾಳಿಕೆ, ಅವ್ಯವಸ್ಥೆ, ಅರಾಜಕತೆ`- ಕಾಂಗ್ರೆಸ್
ಮೋದಿ ಸರ್ಕಾರದ 100 ದಿನಗಳ ಅಧಿಕಾರಾವಧಿಯನ್ನು `ದುರಹಂಕಾರ, ಅನಿಶ್ಚಿತತೆ ಮತ್ತು ದ್ವೇಷದ ರಾಜಕೀಯದಿಂದ ನಿರೂಪಿಸಲಾಗಿದೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ.
ನವದೆಹಲಿ: ಮೋದಿ ಸರ್ಕಾರದ 100 ದಿನಗಳ ಅಧಿಕಾರಾವಧಿಯನ್ನು 'ದುರಹಂಕಾರ, ಅನಿಶ್ಚಿತತೆ ಮತ್ತು ದ್ವೇಷದ ರಾಜಕೀಯದಿಂದ ನಿರೂಪಿಸಲಾಗಿದೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ. ಪ್ರಸಕ್ತ ದೇಶದ ಆರ್ಥಿಕ ಕುಸಿತ, ಕಾಶ್ಮೀರದ ಸ್ಥಿತಿ, ಅಸ್ಸಾಂನ ಎನ್ಆರ್ಸಿ ಮತ್ತು ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷದ ನಾಯಕರ ವಿರುದ್ಧ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಕಿಡಿ ಕಾರಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ವಕ್ತಾರ ಕಪಿಲ್ ಸಿಬಲ್ ಮಾತನಾಡಿ' ಲೋಕಸಭಾ ಚುನಾವಣೆಯಲ್ಲಿ ಜನಸಾಮಾನ್ಯರಿಗೆ ಪರಿಹಾರ ನೀಡಲು ಬಿಜೆಪಿಗೆ ಬೃಹತ್ ಜನಾದೇಶವನ್ನು ನೀಡಲಾಯಿತು. ಆದರೆ ತದನಂತರ ಆಗಿರುವುದೆಲ್ಲಾ ತದ್ವಿರುದ್ದ. ಜನ ಸಾಮಾನ್ಯರ ಸಮಸ್ಯೆಗಳು ಹೆಚ್ಚುತ್ತಿವೆ, ಮಾಧ್ಯಮವು ಹೆಚ್ಚು ಪಕ್ಷಪಾತಿಯಾಗಿದೆ, ಮಹಿಳೆಯರ ವಿರುದ್ಧ ದೌರ್ಜ್ಯನ್ಯ ಹೆಚ್ಚುತ್ತಿದೆ. ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಯಾವುದೇ ಸೂಕ್ತ ಕಾರ್ಯತಂತ್ರವಿಲ್ಲ, ಸಣ್ಣ ವ್ಯಾಪಾರಿ ಸಂಕಷ್ಟದಲ್ಲಿದ್ದಾರೆ ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ದ್ವೇಷದ ರಾಜಕೀಯವಿದೆ' ಎಂದು ಸಿಬಲ್ ಹೇಳಿದರು.
ಇದೇ ವೇಳೆ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ದುರುಪಯೋಗವಾಗುತ್ತಿದೆ ಎಂದು ಸಿಬಲ್ ಆರೋಪಿಸಿದರು. ತಮ್ಮ ಜನರ ವಿರುದ್ಧ ಸಾಕ್ಷ್ಯಾಧಾರಗಳಿದ್ದರೂ ಕೂಡ ಅವರಿಗೆ ಆಶ್ರಯ ನೀಡಲಾಗುತ್ತಿದೆ ಮತ್ತು ಯಾವುದೇ ಸಾಕ್ಷ್ಯಾಧಾರಗಳಿಲ್ಲದ ವಿರೋಧ ಪಕ್ಷದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಂದೆಡೆಗೆ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ನೂರು ದಿನಗಳನ್ನು ಮೂರು ಪದಗಳಲ್ಲಿ ವಿವರಿಸಿ 'ದಬ್ಬಾಳಿಕೆ, ಅವ್ಯವಸ್ಥೆ ಮತ್ತು ಅರಾಜಕತೆ' ಎಂದು ಸರಣಿ ಟ್ವೀಟ್ ಮಾಡಿದೆ.