ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗ ಎಲ್ಲರ ದೃಷ್ಟಿಯಂತೂ ಫಲಿತಾಂಶದ ಮೇಲೆ ಇದೆ, ಈಗಾಗಲೇ ಎಲ್ಲ ಖಾಸಗಿ ವಾಹಿನಿಗಳು ತಾ ಮುಂದು ನಾ ಮುಂದು ಎನ್ನುವಂತೆ  ಸ್ಪರ್ಧೆಗೆ ಬಿದ್ದು ತಮ್ಮ ಸಮೀಕ್ಷೆಯ  ಮೂಲಕ ಗುಜರಾತ್ ನ ಅಧಿಕಾರದ ಚುಕ್ಕಾಣಿ ಯಾರ ಪಾಲಾಗಬಹುದೆಂಬ ಭವಿಷ್ಯವನ್ನು ಕೂಡಾ ನುಡಿದು ಬಿಟ್ಟಿವೆ.


COMMERCIAL BREAK
SCROLL TO CONTINUE READING

ಇವರ ಸಮೀಕ್ಷೆ ಯಂತೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎನ್ನುವುದು ಅವರ ಒಟ್ಟು ಸಮೀಕ್ಷೆಯ ಸಾರಾಂಶ. ಹಾಗಾದರೆ ಇದು ನಿಜಕ್ಕೂ ನಿಜವಾಗುತ್ತಾ ಅಥವಾ ಅವರ ಸಮೀಕ್ಷೆ ಹುಸಿಯಾಗಿ ಸುಮಾರು 22 ವರ್ಷಗಳ ಭದ್ರಕೋಟೆಯನ್ನು ಕಾಂಗ್ರೇಸ್ ಬೇಧಿಸುತ್ತಾ ಎನ್ನುವುದು ಈಗ ಯಕ್ಷ ಪ್ರಶ್ನೆ. ಇಂತಹ ಎಲ್ಲ ಪ್ರಶ್ನೆಗಳು ಮತ್ತು ಕುತೂಹಲಗಳು ಗುಜರಾತಿನ ಚುನಾವಣೆಯ ಸುತ್ತ ಗಿರಕಿ ಹೊಡೆಯುತ್ತಿವೆ ಆದರೆ ಈ ಎಲ್ಲ ಪ್ರಶ್ನೆಗಳಿಗೆ 18ರಂದು ನಡೆಯುವ ಮತ ಎಣಿಕೆ ಮಾತ್ರ ಇದಕ್ಕೆ ಉತ್ತರ ನೀಡಬಲ್ಲದು ಎನ್ನುವುದು ವಾಸ್ತವ ಸತ್ಯ.


ಈ ಎಲ್ಲ ಕುತೂಹಲ ಮತ್ತು ಪ್ರಶ್ನೆಗಳ ಜಾಡನ್ನು ಹಿಡಿದು ಹೊರಟಾಗ ಗುಜರಾತ್ ಚುನಾವಣೆ ನಮಗೆ ಕೆಲವು ವಿಶಿಷ್ಟ ಸಂಗತಿಗಳನ್ನು ಪರಿಚಯ ಮಾಡಿಸುತ್ತದೆ ಕಾರಣ,ಸುಮಾರು 22 ವರ್ಷಗಳ ಕಾಲ ಭದ್ರವಾಗಿದ್ದ ಬಿಜೆಪಿಯ ಕೋಟೆ ಈಗ ಅಲುಗಾಡುತ್ತಿದೆ, ಜಾತಿ ಅಸ್ಮಿತೆಯ ಅಂಶಗಳು ಮತ್ತು ಅದರ ಪ್ರಾತಿನಿಧ್ಯತೆ ಈಗ ಈ ಚುನಾವಣೆಯ ಕೇಂದ್ರ ಬಿಂದುವಾಗಿದೆ. ಆದ್ದರಿಂದಲೇ ಈಗ ಪಾಟಿದಾರ್ ಆಂದೋಲನದ ಪ್ರತಿನಿಧಿಯಾಗಿ ಹಾರ್ಧಿಕ ಪಟೇಲ್ ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಅಲ್ಪೇಶ್ ಠಾಕೂರ್ ಮತ್ತು ದಲಿತ ಸಮುದಾಯದ ಪ್ರತಿನಿಧಿಯಾಗಿ ಜಿಗ್ನೇಶ್ ಮೇವಾನಿ ಈ ಮೂರು ತ್ರಿಮೂರ್ತಿಗಳು ಒಂದರ್ಥದಲ್ಲಿ ತಮ್ಮ ಸಮುದಾಯಗಳ ಪ್ರಾತಿನಿಧ್ಯವನ್ನು ಬಯಸುತ್ತಿದ್ದಾರೆ.


ಈ ನಿಟ್ಟಿನಲ್ಲಿ ಬಿಜೆಪಿಯ ಹಿಂದುತ್ವ ಮತ್ತು ಅಭಿವೃದ್ಧಿಯ ಅಜೆಂಡಾ  ಕಳೆದ 22 ವರ್ಷಗಳ ಆಡಳಿತದಲ್ಲಿ ಈ ಸಮುದಾಯಗಳ ಒಳಗೊಳ್ಳುವಿಕೆಯನ್ನು ಕಡೆಗಣಿಸಿದೆ .ಆದ್ದರಿಂದ ಈ ಬಾರಿ ಬಿಜೆಪಿಗೆ ಈ ಸಮುದಾಯದ ವಲಯದಿಂದ ತೀವ್ರವಾದ ಪ್ರತಿರೋಧ ಒಡ್ಡಲಾಗುತ್ತಿದೆ. ಈ ಎಲ್ಲ ಆತಂಕಗಳು ಒಂದೆಡೆಯಾದರೆ ಇನ್ನೊಂದೆಡೆಗೆ ರಾಹುಲ್ ಗಾಂಧಿ ತಮ್ಮ ಹೊಸ ಬಗೆಯ ಸಂಘಟನಾ ಶೈಲಿಯಿಂದ ಆಡಳಿತ ಪಕ್ಷ ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ. ಇದರ ಪರಿಣಾಮವಾಗಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಸೋಲುವ ಭೀತಿಯಿಂದಾಗಿ ಸುಮಾರು 35 ಕ್ಕೂ ಹೆಚ್ಚು ರ್ಯಾಲಿ ಯನ್ನು ಹಮ್ಮಿಕೊಂಡಿರುವುದು ಇದಕ್ಕೆ ನಿದರ್ಶನ ನೀಡುತ್ತಿದೆ.


ಇನ್ನೊಂದೆಡೆಗೆ ಈ ಗುಜರಾತ್ ಚುನಾವಣೆಯ ಫಲಿತಾಂಶವಂತು ಮುಂದಿನ 2019ರ ಲೋಕಸಭಾ ಚುನಾವಣೆಗೆ ಮುನ್ನಡಿಯನ್ನು ಕೂಡ ಬರೆಯಲಿದೆ.ಕಾರಣ ಪ್ರಧಾನಿಗಳ ರಾಜ್ಯವಾಗಿರುವುದರಿಂದ ಇದು ಅವರಿಗೆ ಪ್ರತಿಷ್ಠಿತ ಸಂಕೇತವಾಗಿದೆ.ಆದ್ದರಿಂದ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಗುಜರಾತಿನ ರ್ಯಾಲಿ ಗಳಲ್ಲಿ  ತಾನು ಹಿಂದುಳಿದ ಸಮುದಾಯದವನು ಮತ್ತು ಮಣಿಶಂಕರ ಅಯ್ಯರರ 'ನೀಚ' ಹಾಗೂ ಗುಜರಾತಿನ ಚುನಾವಣೆಯಲ್ಲಿ ಪಾಕಿಸ್ತಾನದ ಪಿತೂರಿ ಇದೆ ಎನ್ನುವ ಹೇಳಿಕೆಗಳು ಎಲ್ಲೋ ಒಂದು ಕಡೆ ಗುಜರಾತ ತಮ್ಮ ಕೈ ಬಿಟ್ಟು ಹೋಗಬಹುದು ಎನ್ನುವ ಆತಂಕದಿಂದಲೇ ಬಂದಿರುವುದಂತೂ ಸತ್ಯ. 


ಇನ್ನೊಂದು ಕಡೆ ಗುಜರಾತಿನ ಸಣ್ಣ ಉದ್ದಿಮೆದಾರರು ಕೂಡಾ ಜಿ ಎಸ್ ಟಿ ಮತ್ತು ನೋಟು ಅಮಾನ್ಯಕರಣದಿಂದಾಗಿ ರೋಸಿ ಹೋಗಿದ್ದಾರೆ. ಈ ಎಲ್ಲ ಹಿನ್ನಲೆಗಳೊಂದಿಗೆ  ಗುಜರಾತ್ ಚುನಾವಣೆಯ ಫಲಿತಾಂಶ ಕುತೂಹಲಕಾರಿಯಾಗಿದೆ. ಖಾಸಗಿ ವಾಹಿನಿಗಳು ಏನೇ ಸಮೀಕ್ಷೆಯ ಮೂಲಕ ಭವಿಷ್ಯ ನುಡಿದಿದ್ದರು ಕೂಡಾ ಅದು ಅಂತಿಮವಾಗಿ ತಿರ್ಮಾನವಾಗುವುದು ಮತ ಎಣಿಕೆಯ ದಿನವಷ್ಟೇ ಎನ್ನುವುದು ಸತ್ಯದ ಸಂಗತಿ. ಕಾರಣ ಈ ಹಿಂದಿನ ದೆಹಲಿ ಮತ್ತು ಬಿಹಾರದ ಚುನಾವಣೆಯಲ್ಲಿ ಬಹುತೇಕ ಚುನಾವಣಾ ಸಮೀಕ್ಷೆಗಳು ಸುಳ್ಳಾಗಿದ್ದವು ಎನ್ನುವುದನ್ನು ನಾವು ಗಮನಿಸಬಹುದು. ಆದ್ದರಿಂದ 18 ರಂದು ಗುಜರಾತಿನ ಜಯದ ಮಾಲೆ ಕಾಂಗ್ರೆಸ್ಸಿಗೂ ಅಥವಾ ಬಿಜೆಪಿಗೂ ಎನ್ನವುದು ಸ್ಪಷ್ಟವಾಗಲಿದೆ.