ಇಂದು ವರ್ಗಿಸ್ ಕುರೇನ್ ಜನ್ಮದಿನ
ಭಾರತದಲ್ಲಿ ಅಮುಲ್ ಸಂಸ್ಥೆಯನ್ನು ಕಟ್ಟುವುದರ ಮೂಲಕ ಕ್ಷೀರ ಕ್ರಾಂತಿಗೆ ನಾಂದಿ ಹಾಡಿದ್ದರು
'ಅಮುಲ್' ಎನ್ನುವ ಹೆಸರು ಈ ದೇಶದಲ್ಲಿ ಕೇಳದೆ ಇರುವವರಾರು ಹೇಳಿ, ಭಾರತದ ಉತ್ತರದಿಂದ ದಕ್ಷಿಣದವರೆಗೂ ಹಾಲು ಮತ್ತು ಅಮುಲ್ ಎನ್ನುವ ಎರಡು ಹೆಸರುಗಳು ಒಂದಕ್ಕೊಂದು ಬೆರೆತುಹೋಗಿವೆ. ಅಷ್ಟರಮಟ್ಟಿಗೆ ಅವೆರಡು ದೇಶದಲ್ಲೆಡೆ ಜನಪ್ರಿಯವಾಗಿವೆ ಎಂದರೆ ಅದು ತಪ್ಪಾಗಲಾರದು.
ಹೌದು ನಾವು ಈಗ ಹೇಳ ಹೊರಟಿರುವುದು ಹಾಲು ಮತ್ತು ಅಮುಲ್ ನಡುವಿನ ಸಂಬಂಧವಾದರೂ ಸಹಿತ ಇದರ ಜೊತೆಗೆ ನಾವು ಇನ್ನೊಂದು ಮರೆಯಲಾಗದ ಹೆಸರು, ಅದೇ ವರ್ಗಿಸ್ ಕುರೇನ್.ಇಂದು ಅವರ 96ನೇಯ ಜನ್ಮ ದಿನಾಚರಣೆ.ಇಂತಹ ಸಂಧರ್ಭದಲ್ಲಿ ಇಂದು ನಾವೆಲ್ಲಾ ಅವರನ್ನು ನಾವು ಸ್ಮರಿಸಬೇಕಾಗಿದೆ.
ವರ್ಗಿಸ್ ಕುರೇನ್ ರು ನವಂಬರ್ 26, 1921 ಕೇರಳದ ಕ್ಯಾಲಿಕಟ್ ನಲ್ಲಿ ಸಿರಿಯನ್ ಕ್ರೈಸ್ಟ್ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಪುಥೆನಪಾರಕ್ಕಲ್ ವೃತ್ತಿಯಲ್ಲಿ ಸರ್ಜನ್ ರಾಗಿದ್ದರು, ತಾಯಿ ಪಿಯಾನೋ ದಲ್ಲಿ ಪರಿಣಿತಿಯನ್ನು ಪಡೆದಿದ್ದರು.ಇವರ ಚಿಕ್ಕಪ್ಪ ರಾವ್ ಸಾಹೇಬ್ ಪಿ.ಕೆ.ವರ್ಗಿಸ್ ರವರ ಹೆಸರನ್ನು ಇವರಿಗೆ ಇಡಲಾಯಿತು.ಕುರೇನ್ ಮದ್ರಾಸ್ನ ಲೋಯೋಲಾ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದರು,ಮತ್ತು ಕಾಲೇಜು ದಿನಗಳಲ್ಲಿ ಕ್ರಿಕೆಟ್,ಬ್ಯಾಡ್ಮಿಂಟನ್,ಟೆನಿಸ್ನಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದರು.ನಂತರ ಶಿಷ್ಯವೇತನದ ಮೇಲೆ ಅಮೆರಿಕಾಗೆ ಹೋದ ಅವರು ಅಲ್ಲಿ ತಮ್ಮ ಎಂಎಸ್ಸಿ ಪದವಿ ಯನ್ನು ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದು 1949 ಮೇ 13ರಂದು ಭಾರತಕ್ಕೆ ಮರಳಿದ ಅವರು ಗುಜರಾತ್ ನ ಕೈರಾ ಜಿಲ್ಲೆಯ ಆನಂದ್ ಎನ್ನುವ ಪ್ರದೇಶಕ್ಕೆ 5 ವರ್ಷಗಳ ಕಾಲ ಡೈರಿ ಆಫಿಸರ್ ಆಗಿ ಕಾರ್ಯ ನಿರ್ವಹಿಸಬೇಕಾಗಿತ್ತು.ಆ ಸಂಧರ್ಭದಲ್ಲಿ ರೈತರು ಇಡಿ ಪ್ರದೇಶದಲ್ಲಿ ಹಾಲಿನ ವಿತರಕರಿಂದಾಗಿ ಶೋಷಣೆಯನ್ನು ಅನುಭವಿಸುವಂತಾಗಿತ್ತು.ಇದೆ ಸಂದರ್ಭದಲ್ಲಿ ಅಲ್ಲಿ ತ್ರಿಭುವನಧಾಸ್ ಪಟೇಲ್ ಸಹಕಾರಿ ಸಂಘಗಳ ಮೂಲಕ ರೈತರನ್ನು ಸಂಘಟಿಸುತ್ತಿದ್ದರು.ಇದರಿಂದ ಪ್ರೇರಿತಗೊಂಡ ಕುರೇನ್ ರವರು ಮುಂದೆ ಸರ್ಕಾರಿ ನೌಕರಿಯನ್ನು ತ್ಯೆಜಿಸಿ ಆ ಪ್ರದೇಶದಲ್ಲಿ ಕೈರಾ ಜಿಲ್ಲೆಯ ಹಾಲು ಉತ್ಪಾದಕರ ಸಂಘವನ್ನು ಸ್ಥಾಪಿಸಿದರು. ಮುಂದೆ ಅದೇ ಈಗಿನ 'ಅಮುಲ್' ಎನ್ನುವ ಹೆಸರಿನೊಂದಿಗೆ ಖ್ಯಾತಿ ಪಡೆಯಿತು.ಮುಂದೆ ದೇಶದೆಲ್ಲೆಡೆ ಇವರ ನೇತೃತ್ವದಲ್ಲಿ ಹಲವಾರು ಸಂಸ್ಥೆಗಳು ಹುಟ್ಟಿಕೊಂಡವು.ಅದರಲ್ಲಿ ಪ್ರಮುಖವಾಗಿ ಗುಜರಾತ್ ಕೊಅಪೆರೆಟಿವ್ ಮಿಲ್ಕ್ ಮಾರ್ಕೆಟಿಂಗ್ ಲಿಮಿಟೆಡ್ ಮತ್ತು ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ ಮೂಲಕ ದೇಶವ್ಯಾಪ್ತಿ ಕ್ಷೀರ ಕ್ರಾಂತಿಯನ್ನು ಮಾಡಿದರು.
ಇವರ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಇವರಿಗೆ ಬಂದಿವೆ.ಅದರಲ್ಲಿ ಪ್ರಮುಖವಾಗಿ ಮ್ಯಾಗ್ಸೆಸೆ(1963) ಪದ್ಮಶ್ರೀ,ಪದ್ಮಭೂಷಣ, ಪದ್ಮವಿಭೂಷಣ, ಜಾಗತಿಕ ಆಹಾರ ಪ್ರಶಸ್ತಿ, ಈ ಎಲ್ಲಾ ಪ್ರಶಸ್ತಿಗಳಿಗಿಂತಲೂ ಜನರು ನೀಡಿದ 'ಮಿಲ್ಕ್ ಮ್ಯಾನ್ ಆಫ್ ಇಂಡಿಯಾ'(ಕ್ಷೀರದ ಪಿತಾಮಹ) ಎನ್ನುವುದು ಎಂದೆಂದಿಗೂ ಇರುವಂತಹದು.2012 ಸೆಪ್ಟಂಬರ್ 9ರಲ್ಲಿ ಅನಾರೋಗ್ಯದ ಕಾರಣದಿಂದಾಗಿ 'ಆನಂದ'ದಲ್ಲಿ ತಮ್ಮ ಕೊನೆ ಉಸಿರೆಳೆದರು. ಆದರೆ ಭಾರತೀಯರ ಮನದಲ್ಲಿ ಇವರ ಕೊಡುಗೆ ಎಂದೆಂದಿಗೂ ಅಮರ.