ಪುಲ್ವಾಮ ದಾಳಿ: 100 ಗಂಟೆಯೊಳಗೆ ಕಾಶ್ಮೀರದಲ್ಲಿ JeM ನಾಯಕರನ್ನು ಹೊಡೆದುರುಳಿಸಿದ ಸೇನೆ
ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಕಮ್ರಾನ್ ಅಲಿಯಾಸ್ ಅಬ್ದುಲ್ ರಶೀದ್ ಘಾಜಿಯನ್ನು ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲಾಗಿದೆ.
ಶ್ರೀನಗರ: ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಆತ್ಮಹತ್ಯೆ ಬಾಂಬ್ ಸ್ಫೋಟ ನಡೆದ 100 ಗಂಟೆಗಳೊಳಗೆ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈಶ್-ಎ-ಮೊಹಮ್ಮದ್ ಮುಖಂಡರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲಾಗಿದೆ ಎಂದು ಮಂಗಳವಾರ ಸೇನೆ ತಿಳಿಸಿದೆ.
ಮಂಗಳವಾರ ಸಿಆರ್‌ಪಿಎಫ್, ಸೇನೆ ಹಾಗೂ ಪೊಲೀಸರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಕನ್ವಾಲ್ ಜೀತ್ ಸಿಂಗ್ ಡಿಲ್ಲನ್ ಮತ್ತು ಕಾರ್ಪ್ಸ್ ಕಮಾಂಡರ್ ಚಿನಾರ್ ಕಾರ್ಪ್ಸ್, ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಕಮ್ರಾನ್ ಅಲಿಯಾಸ್ ಅಬ್ದುಲ್ ರಶೀದ್ ಘಾಜಿಯನ್ನು ಕೊಲ್ಲಲಾಗಿದೆ. ಈತನ ಜತೆಗೆ ಸ್ಥಳೀಯ ಉಗ್ರಗಾಮಿ ಹಿಲಾಲ್ ಅಹ್ಮದ್ ಮತ್ತು ಮತ್ತೋರ್ವ ಉಗ್ರನನ್ನೂ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದರು.
ಬಂದೂಕು ಎತ್ತಿಕೊಳ್ಳುವವರಿಗೆ ಸಾವು ಖಚಿತ:
ಕಾಶ್ಮೀರಿ ಸಮಾಜದಲ್ಲಿ ಎಲ್ಲ ತಾಯಂದಿರು ಉತ್ತಮ ಪಾತ್ರವಹಿಸುತ್ತಿದ್ದಾರೆ ಎಂದು ತಿಳಿಸಿದ ಲೆಫ್ಟಿನೆಂಟ್ ಜನರಲ್ ಡಿಲ್ಲನ್, ಉಗ್ರ ಸಂಘಟನೆ ಜತೆ ಸಕ್ರೀಯರಾಗಿರುವ ನಿಮ್ಮ ಮಕ್ಕಳನ್ನು ಶರಣಾಗುವಂತೆ ಮನವೊಲಿಸಲು ಯುವಕರ ತಾಯಂದಿರಿಗೆ ಮನವಿ ಮಾಡಿದ್ದೇವೆ. ಭಯೋತ್ಪಾದನೆಯಲ್ಲಿ ತೊಡಗಿರುವ ಯುವಕರು ಶರಣಾಗದಿದ್ದರೆ, ಯಾವುದೇ ಭಯೋತ್ಪಾದಕರೊಂದಿಗೆ ಸಿಕ್ಕಿಬಿದ್ದರೆ ಅವರ ಪ್ರಾಣ ಉಳಿಯುವುದಿಲ್ಲ. ಬಂದೂಕು ಎತ್ತಿಕೊಳ್ಳುವವರಿಗೆ ಸಾವು ಖಚಿತ ಎಂಬ ಎಚ್ಚರಿಕೆಯ ಸಂದೇಶವನ್ನು ಅವರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪಾಕ್ ಸೈನ್ಯ ಮತ್ತು ಐಎಸ್ಐಯ ಜೈಶ್ ಆಜ್ಞೆ ಮೇರೆಗೆ ದಾಳಿ:
ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿ ಪಾಕ್ ಪ್ರೇರಿತ ದಾಳಿಯಾಗಿದೆ. ಪಾಕಿಸ್ತಾನದ ಸೈನ್ಯ ಮತ್ತು ಐಎಸ್ಐ ಆಜ್ಞೆಯ ಮೇರೆಗೆ ಪುಲ್ವಾಮಾದಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ ಲೆಫ್ಟಿನೆಂಟ್ ಜನರಲ್ ಡಿಲ್ಲನ್, ಘಟನೆ ನಡೆದ 100 ಗಂಟೆಯೊಳಗೆ ಜೈಷ್ ಎ ಮಹಮ್ಮದ್ ಸಂಘಟನೆಯ ಉಗ್ರರನ್ನು ಕೊಂದಿದ್ದೇವೆ ಎಂದು ಸೇನಾ ಸಾಮರ್ಥ್ಯದ ಬಗ್ಗೆ ತಿಳಿಸಿದರು.
ಪುಲ್ವಾಮಾ ಆಕ್ರಮಣದ ನಂತರ ಐಎಸ್ಐ ಮತ್ತು ಪಾಕಿಸ್ತಾನಿ ಸೈನ್ಯದ ಸಕ್ರಿಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಕಾರ್ಯ ಚಟುವಟಿಕೆಯನ್ನು ಟ್ರಾಕ್ ಮಾಡಲಾಗುತ್ತಿತ್ತು. ಸೋಮವಾರ ಮುಂಜಾನೆ ಪುಲ್ವಾಮಾದ ಪಿಂಗ್ಲಾನ್‌ನಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮೂವರು ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರಾಷ್ಟ್ರೀಯ ರೈಫಲ್, ಸಿಆರ್‌ಪಿಎಫ್, ಜಮ್ಮು-ಕಾಶ್ಮೀರ ಪೊಲೀಸರ ಕಾರ್ಯಾಚರಣೆಯ ತಂಡಕ್ಕೆ ಸಿಕ್ಕಿತು. ಮಾಹಿತಿಯನ್ನು ಆಧರಿಸಿ ಶೋಧ ಕಾರ್ಯ ನಡೆಸಲಾಗಿತ್ತು. ಆ ವೇಳೆ ಉಗ್ರರು ಸೇನೆಯ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಪ್ರತ್ರ್ಯುತ್ತರವಾಗಿ ಸೇನೆಯಿಂದಲೂ ಗುಂಡು ಹಾರಿಸಲಾಯಿತು. ಈ ಗುಂಡಿನ ಚಕಮಕಿಯಲ್ಲಿ ದಾಳಿಯ ರೂವಾರಿ ಕಮ್ರಾನ್‌ನನ್ನು ಕೊಲ್ಲಲಾಯಿತು. ಈತನ ಜತೆಗೆ ಸ್ಥಳೀಯ ಉಗ್ರಗಾಮಿ ಹಿಲಾಲ್ ಅಹ್ಮದ್ ಮತ್ತು ಮತ್ತೋರ್ವ ಉಗ್ರನನ್ನೂ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಎನ್ಕೌಂಟರ್ ಪ್ರದೇಶದಿಂದ ನಾಗರೀಕರು ದೂರ ಇರುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ ಅವರು, ನಮ್ಮ ಕಾರ್ಯಾಚರಣೆಯಲ್ಲಿ ಯಾವುದೇ ಕಾಶ್ಮೀರ ನಾಗರಿಕನಿಗೂ ತೊಂದರೆ ಆಗಿಲ್ಲ. ತೊಂದರೆ ಉಂಟುಮಾಡುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟನೆ ನೀಡಿದರು.