ತ್ರಿಪುರಾ: ತ್ರಿಪುರಾ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ನಡೆಯಲಿದೆ. 


COMMERCIAL BREAK
SCROLL TO CONTINUE READING

ರಾಜ್ಯದ 3,214 ಮತಗಟ್ಟೆಗಳಲ್ಲಿ ಮತದಾನ ಪ್ರಗತಿಯಲ್ಲಿದೆ. ಇಂದಿನ ಚುನಾವಣೆಯಲ್ಲಿ 23 ಮಹಿಳೆಯರು ಸೇರಿದಂತೆ 292 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮತದಾರರು ಮತಗಟ್ಟೆಯ ಎದುರು ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಲು ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬರುತ್ತಿದೆ. 


ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅಗರ್ತಲಾ ಮತಗಟ್ಟೆಯಲ್ಲಿ ಮಾತದಾನ ಮಾಡಿದರು. ಅವರು ಧಾಮ್ಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.



ಬಹುನಿರೀಕ್ಷಿತ ಈಶಾನ್ಯ ರಾಜ್ಯವಾದ ತ್ರಿಪುರಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ, ಆಡಳಿತಾರೂಢ ಎಡರಂಗದ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.


ಕಳೆದ 25 ವರ್ಷಗಳಿಂದ ಇಲ್ಲಿ ಆಳ್ವಿಕೆ ನಡೆಸುತ್ತಿರುವ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ಮಾಡುತ್ತಿವೆ.


ಬಿಜೆಪಿ 51 ಸ್ಥಾನಗಳಲ್ಲಿ ಹಾಗೂ ಅದು ಮೈತ್ರಿ ಮಾಡಿಕೊಂಡಿರುವ ಐಪಿಎಫ್ ಟಿ 9 ಸ್ಥಾನಗಳಲ್ಲಿ, ಸಿಪಿಎಂ 57 ಸ್ಥಾನಗಳಲ್ಲಿ ಹಾಗೂ ಅದರ ಮೈತ್ರಿ ಪಕ್ಷಗಳಿಗೆ 2 ಸೀಟು ಬಿಟ್ಟುಕೊಟ್ಟರೆ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. 


ಮೇಘಾಲಯ ಮತ್ತು ನಾಗಲ್ಯಾಂಡ್ ಜೊತೆಗೆ ತ್ರಿಪುರಾ ಚುನಾವಣೆ ಫಲಿತಾಂಶ ಮಾರ್ಚ್ 3ರಂದು ಘೋಷಣೆಯಾಗಲಿದೆ.


ಸಿಪಿಎಂ ಅಭ್ಯರ್ಥಿ ರಮೇಂದ್ರ ನಾರಾಯಣ್ ದೆಬ್ಬರ್ಮ ಅವರ ನಿಧನದಿಂದ ಚಾರಿಲಮ್ ಕ್ಷೇತ್ರದಲ್ಲಿ ಇಂದಿನ ಮತದಾನವನ್ನು ಮುಂದೂಡಲಾಗಿದ್ದು, ಮಾರ್ಚ್ 12ರಂದು ಇಲ್ಲಿ ಮತದಾನ ನಡೆಯಲಿದೆ.